ADVERTISEMENT

ಆರ್ಥಿಕತೆ ಪುಟಿದೇಳಲಿದೆ: ಎಸ್‌ಬಿಐ

ಪಿಟಿಐ
Published 7 ನವೆಂಬರ್ 2020, 19:27 IST
Last Updated 7 ನವೆಂಬರ್ 2020, 19:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತ್ತ: ‘ಕೋವಿಡ್‌–19 ಸಾಂಕ್ರಾಮಿಕದಿಂದ ಕುಸಿದಿದ್ದ ಅರ್ಥ ವ್ಯವಸ್ಥೆ ಚೇತರಿಸಿಕೊಳ್ಳಲು ಆರಂಭಸಿದ್ದು, ಮುಂದಿನ ಹಣಕಾಸು ವರ್ಷದಿಂದ ಪುಟಿದೇಳುವ ನಿರೀಕ್ಷೆ ಇದೆ’ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ನ (ಎಸ್‌ಬಿಐ) ಅಧ್ಯಕ್ಷ ದಿನೇಶ್‌ ಕುಮಾರ್‌ ಖರಾ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ನಡೆದ ‘ಬೆಂಗಾಲ್‌ ಚೇಂಬರ್‌ ಆಫ್ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿ’ಯ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ‘ಆರ್ಥಿಕ ನೀತಿ ನಿರೂಪಕರು ವೆಚ್ಚವನ್ನು ನಿಯಂತ್ರಿಸಲು ಗಮನ ನೀಡುತ್ತಿದ್ದಾರೆ. ಇದರಿಂದಾಗಿ ಆರ್ಥಿಕತೆಯು ಇನ್ನಷ್ಟು ಪರಿಪಕ್ವಗೊಳ್ಳಲಿದೆ’ ಎಂದು ಹೇಳಿದ್ದಾರೆ.

‘ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಅಂತ್ಯದ ಬಳಿಕ ಆರ್ಥಿಕತೆಯಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಕಂಡುಬರುತ್ತಿವೆ’ ಎಂದಿದ್ದಾರೆ.

ADVERTISEMENT

‘ಕಾರ್ಪೊರೇಟ್‌ ವಲಯದ ಹೂಡಿಕೆಯು ಚೇತರಿಕೆ ಕಾಣಲು ಇನ್ನೂ ಕೆಲವು ಸಮಯ ಬೇಕಾಗಲಿದೆ. ಸಾಲ ಪಡೆಯುವ ಕುರಿತು ಕಾರ್ಪೊರೇಟ್ ವಲಯವು ಬಹಳ ಜಾಗರೂಕತೆ ವಹಿಸುತ್ತಿದೆ. ಆರಂಭದಿಂದಲೂ ತಮ್ಮ ಆಂತರಿಕ ಸಂಪನ್ಮೂಲಗಳನ್ನೇ ಬಳಸುತ್ತಿವೆ. ಉತ್ತಮ ಹಣಕಾಸು ಸ್ಥಿತಿ ಹೊಂದಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ತಮ್ಮ ಯೋಜಿತ ಬಂಡವಾಳ ವೆಚ್ಚ ಮಾಡುವುದನ್ನು ಆರಂಭಿಸಲಿವೆ. ಇದರಿಂದಾಗಿ ಹೂಡಿಕೆಗೆ ಬೇಡಿಕೆ ಸೃಷ್ಟಿಯಾಗಲಿದೆ’ ಎಂದಿದ್ದಾರೆ.

‘ಉಕ್ಕು ಮತ್ತು ಸಿಮೆಂಟ್‌ನಂತಹ ಮೂಲಸೌಕರ್ಯ ವಲಯಗಳು 2020ರ ಏಪ್ರಿಲ್‌ನಿಂದಲೂ ಉತ್ತಮ ಬೆಳವಣಿಗೆ ಕಾಣುತ್ತಿದ್ದು, ರಫ್ತು ಮಾರುಕಟ್ಟೆಯನ್ನು ತಲುಪುವ ಹಂತದಲ್ಲಿವೆ. ಆದರೆ, ಪ್ರಯಾಣ, ಪ್ರವಾಸ ಮತ್ತು ಆತಿಥ್ಯ ವಲಯವು ಕೋವಿಡ್‌–19 ಸಾಂಕ್ರಾಮಿಕದಿಂದ ಅತಿ ಹೆಚ್ಚಿನ ಸಂಕಷ್ಟಕ್ಕೆ ಒಳಗಾಗಿವೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.