ಉದ್ಯಮಿ ಇಲಾನ್ ಮಸ್ಕ್
ಚಿತ್ರ ಕೃಪೆ: X / @elonmusk
ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿ 'ಟೆಸ್ಲಾ' ಸಿಇಒ, ಉದ್ಯಮಿ ಇಲಾನ್ ಮಸ್ಕ್ ಅವರ ಸಂಪತ್ತಿನ ಮೌಲ್ಯ 2025ನೇ ವರ್ಷ ಮುಗಿಯುವ ಹೊತ್ತಿಗೆ ಅಂದಾಜು 726.3 ಶತಕೋಟಿ ಡಾಲರ್‌ನಷ್ಟಿತ್ತು. ಇದೀಗ, 800 ಶತಕೋಟಿ ಡಾಲರ್ ದಾಟಿದೆ.
ಮಸ್ಕ್ ಒಡೆತನದಲ್ಲಿರುವ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 'ಸ್ಪೇಸ್‌ಎಕ್ಸ್', ಕೃತಕ ಬುದ್ಧಿಮತ್ತೆ 'ಎಕ್ಸ್‌ಎಐ' ವಿಲೀನ ಪ್ರಕ್ರಿಯೆ ಬಳಿಕ ಅವರ ಸಂಪತ್ತಿನಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಅಲ್ಲದೆ, ಅವರು 2027ರ ಹೊತ್ತಿಗೆ ವಿಶ್ವದ ಮೊದಲ ಟ್ರಿಲಿಯನೇರ್ (ಲಕ್ಷ ಕೋಟಿ ಡಾಲರ್ ಒಡೆಯ – ಅಂದಾಜು ₹ 83.95 ಲಕ್ಷ ಕೋಟಿ ಸಂಪತ್ತಿನ ಮಾಲೀಕ) ಎನಿಸಿಕೊಳ್ಳಲಿದ್ದಾರೆ ಎಂದು 'ಇನ್‌ಫಾರ್ಮಾ ಕನೆಕ್ಟ್ ಅಕಾಡೆಮಿ' ಅಂದಾಜಿಸಿದೆ.
ಉದ್ಯಮ, ವಾಣಿಜ್ಯ-ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿ ಹಂಚಿಕೊಳ್ಳುವ ಅಮೆರಿಕದ ನಿಯತಕಾಲಿಕೆ 'ಫೋರ್ಬ್ಸ್' ಪ್ರಕಟಿಸಿರುವ ಅಂಕಿ-ಅಂಶಗಳ ಪ್ರಕಾರ, ಮಸ್ಕ್ ನಿವ್ವಳ ಆಸ್ತಿ ಮೌಲ್ಯ 2026ರ ಫೆಬ್ರುವರಿ 12ರ ವೇಳೆಗೆ ಬರೋಬ್ಬರಿ 857 ಶತಕೋಟಿ ಡಾಲರ್‌ಗೆ ತಲುಪಿದೆ. ಇದರೊಂದಿಗೆ, 800 ಶತಕೋಟಿ ಡಾಲರ್ ನಿವ್ವಳ ಆಸ್ತಿ ಸಂಪಾದಿಸಿದ ಮೊದಲಿಗ ಎಂಬ ಹೆಗ್ಗಳಿಕೆಗೆ ಅವರು ಭಾಜನರಾಗಿದ್ದಾರೆ.
170 ರಾಷ್ಟ್ರಗಳನ್ನು ಹಿಂದಿಕ್ಕಿದ ಮಸ್ಕ್
'ಫೋರ್ಬ್ಸ್' ಹಂಚಿಕೊಂಡಿರುವ ಮಾಹಿತಿಯಂತೆ, ಜಗತ್ತಿನ ಸಿರಿವಂತರ ಸಾಲಿನಲ್ಲಿ ಎರಡು ಹಾಗೂ ಮೂರನೇ ಸ್ಥಾನದಲ್ಲಿರುವ ಗೂಗಲ್ ಸಹ ಸಂಸ್ಥಾಪಕರಾದ ಲ್ಯಾರಿ ಪೇಜ್ (255 ಶತಕೋಟಿ ಡಾಲರ್) ಹಾಗೂ ಸೆರ್ಗೆ ಬ್ರಿನ್ (235 ಶತಕೋಟಿ ಡಾಲರ್) ಅವರು ಹೊಂದಿರುವ ಸಂಪತ್ತಿಗೂ ಮಸ್ಕ್ ಆಸ್ತಿ ಪ್ರಮಾಣಕ್ಕೂ ಬರೋಬ್ಬರಿ 600 ಶತಕೋಟಿ ಡಾಲರ್‌ಗೂ ಹೆಚ್ಚಿನ ಅಂತರವಿದೆ.
ಅಗರ್ಭ ಸಿರಿವಂತರಿಂದಲೇ ಇಷ್ಟು ದೊಡ್ಡ ಮೊತ್ತದ ಅಂತರ ಕಾಯ್ದುಕೊಂಡಿರುವ ಮಸ್ಕ್, ಜಗತ್ತಿನ ಸಮಾರು 170 ರಾಷ್ಟ್ರಗಳನ್ನೂ ಹಿಂದಿಕ್ಕಿದ್ದಾರೆ ಎಂಬುದು ಅಚ್ಚರಿಯ ಸಂಗತಿ.
ಈ ಕುರಿತು ಕಳೆದ ವರ್ಷಾಂತ್ಯದಲ್ಲೇ ಮಾಹಿತಿ ಹಂಚಿಕೊಂಡಿದ್ದ 'ಫೋರ್ಬ್ಸ್ ಇಂಡಿಯಾ', ಮಸ್ಕ್ ನಿವ್ವಳ ಆಸ್ತಿ ಮೌಲ್ಯವು ಜಗತ್ತಿನ 170 ರಾಷ್ಟ್ರಗಳ ವಾರ್ಷಿಕ ಜಿಡಿಪಿಗಿಂತಲೂ ಅಧಿಕವಿದೆ ಎಂದು ಪ್ರಕಟಿಸಿತ್ತು. 'Worldometer' ಕೂಡ, ಇದೇ ರೀತಿಯ ಮಾಹಿತಿಯನ್ನು ಹಂಚಿಕೊಂಡಿವೆ.
'Worldometer' ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ, ಕೇವಲ 22 ರಾಷ್ಟ್ರಗಳಷ್ಟೇ ಮಸ್ಕ್‌ಗಿಂತ ಹೆಚ್ಚಿನ ಜಿಡಿಪಿಯನ್ನು ಹೊಂದಿವೆ. 2025ರ ಅಂದಾಜಿನ ಪ್ರಕಾರ, ಅಮೆರಿಕ, ಚೀನಾ, ಜರ್ಮನಿ, ಜಪಾನ್, ಭಾರತ, ಇಂಗ್ಲೆಂಡ್, ಫ್ರಾನ್ಸ್, ಇಟಲಿ, ರಷ್ಯಾ, ಕೆನಡಾ, ಬ್ರೆಜಿಲ್, ಸ್ಪೇನ್, ಮೆಕ್ಸಿಕೊ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಟರ್ಕಿ, ಇಂಡೊನೇಷ್ಯಾ, ನೆದರ್‌ಲೆಂಡ್ಸ್, ಸೌದಿ ಅರೇಬಿಯಾ, ಪೋಲೆಂಡ್, ಸ್ವಿಟ್ಜರ್‌ಲೆಂಡ್, ತೈವಾನ್ ಮಾತ್ರವೇ ಮಸ್ಕ್‌ಗಿಂತ ಮುಂದಿವೆ. ತೈವಾನ್ ಹೊರತುಪಡಿಸಿ ಈ ಪಟ್ಟಿಯಲ್ಲಿ, ಉಳಿದೆಲ್ಲ ರಾಷ್ಟ್ರಗಳು ಲಕ್ಷ ಕೋಟಿ ಡಾಲರ್ ಆರ್ಥಿಕತೆಯನ್ನು ಹೊಂದಿವೆ.
ನಾಲ್ಕನೇ ಸ್ಥಾನದಲ್ಲಿ ಭಾರತ
ವಿವಿಧ ದೇಶಗಳ ಜಿಡಿಪಿಗೆ ಸಂಬಂಧಿಸಿದಂತೆ ಲಭ್ಯವಿರುವ ಇತ್ತೀಚಿನ ಮಾಹಿತಿ ಆಧರಿಸಿ 'Niva Bupa' ವಿಮಾ ಕಂಪನಿಯು, ಶ್ರೀಮಂತ ರಾಷ್ಟ್ರಗಳ ಕುರಿತು ಕಳೆದ ವಾರ ವರದಿ ಪ್ರಕಟಿಸಿದೆ.
ವರದಿಯಲ್ಲಿ ಉಲ್ಲೇಖಿಸಿರುವಂತೆ ಅಮೆರಿಕ (31.62 ಲಕ್ಷ ಕೋಟಿ ಡಾಲರ್), ಚೀನಾ (20.65 ಲಕ್ಷ ಕೋಟಿ ಡಾಲರ್), ಜರ್ಮನಿ (5.33 ಲಕ್ಷ ಕೋಟಿ ಡಾಲರ್) ಮೊದಲ ಮೂರು ಸ್ಥಾನಗಳಲ್ಲಿವೆ. ಭಾರತ (4.51 ಲಕ್ಷ ಕೋಟಿ ಡಾಲರ್) ನಾಲ್ಕನೇ ಸ್ಥಾನದಲ್ಲಿದ್ದು, ಜಪಾನ್ (4.46 ಲಕ್ಷ ಕೋಟಿ ಡಾಲರ್) ಐದರಲ್ಲಿದೆ.
ಟಾಪ್–5 ಸಿರಿವಂತರು
ಇಲಾನ್ ಮಸ್ಕ್ – 849 ಶತಕೋಟಿ ಡಾಲರ್
ಲ್ಯಾರಿ ಪೇಜ್ – 255 ಶತಕೋಟಿ ಡಾಲರ್
ಸೆರ್ಗೆ ಬ್ರಿನ್ – 235 ಶತಕೋಟಿ ಡಾಲರ್
ಮಾರ್ಕ್ ಜುಕರ್‌ಬರ್ಗ್ – 222 ಶತಕೋಟಿ ಡಾಲರ್
ಜೆಫ್ ಬೆಜೋಸ್ – 214 ಶತಕೋಟಿ ಡಾಲರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.