ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ತನ್ನ ಸದಸ್ಯರ ಖಾತೆಯಿಂದ ಹಣ ವರ್ಗಾವಣೆ ಮತ್ತು ಹಿಂದೆ ಪಡೆಯುವ ನಿಯಮಗಳನ್ನು ಸರಳಗೊಳಿಸಿದೆ.
ಭವಿಷ್ಯ ನಿಧಿ ಖಾತೆ ಹೊಂದಿದವರ ಅನುಕೂಲಕ್ಕಾಗಿ ಸಂಘಟನೆಯು ತನ್ನ ಅಂತರ್ಜಾಲ ತಾಣದಲ್ಲಿ (https://unifiedportal-mem.epfindia.gov.in/memberinterface/) ಹೊಸ ಸೌಲಭ್ಯ ಕಲ್ಪಿಸಿ ಟ್ಟಿಟರ್‌ನಲ್ಲಿ ಮಾಹಿತಿ ನೀಡಿದೆ.
ಕೆಲಸ ಬದಲಿಸಿದ ಸಂದರ್ಭದಲ್ಲಿ ತಾನು ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿ ತೊರೆದ ದಿನವನ್ನು ಉದ್ಯೋಗಿಯು ಅಂತರ್ಜಾಲ ತಾಣದಲ್ಲಿ ಬದಲಿಸಲು ಅವಕಾಶ ನೀಡಲಾಗಿದೆ. ಈ ಉದ್ದೇಶಕ್ಕೆ ಉದ್ಯೋಗಿಗಳು ತಾವು ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಯನ್ನು ನೆಚ್ಚಿಕೊಳ್ಳುವ ಅಗತ್ಯವು ಇನ್ನು ಮುಂದೆ ಇರುವುದಿಲ್ಲ.
ಕೆಲಸ ಬಿಟ್ಟ ನಂತರ ತಾನು ಕೆಲಸ ಮಾಡುವ ಸಂಸ್ಥೆಯನ್ನು ತೊರೆದ ದಿನವನ್ನು ಪಿಎಫ್ ಖಾತೆಯಲ್ಲಿ ನಮೂದಿಸಲು ಉದ್ಯೋಗಿಗೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕೂ ಮೊದಲು, ಉದ್ಯೋಗಿಯು ಕೆಲಸ ತೊರೆದ ದಿನ ನವೀಕರಿಸುವ ಅವಕಾಶವನ್ನು ಉದ್ಯೋಗದಾತ ಕಂಪನಿಗೆ ಮಾತ್ರ ನೀಡಲಾಗಿತ್ತು. ‘ಇಪಿಎಫ್‌ಒ’ ದಾಖಲೆಗಳಲ್ಲಿ ಕೆಲಸ ತೊರೆಯುವ ದಿನ ನಮೂದಿಸಿರದಿದ್ದರೆ ಉದ್ಯೋಗ ತೊರೆದು ಹೊಸ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಾಗ ಹಳೆ ಖಾತೆಯಲ್ಲಿನ ಹಣವನ್ನು ಹೊಸ ಖಾತೆಗೆ ವರ್ಗಾಯಿಸುವುದು ಮತ್ತು ಖಾತೆಯಿಂದ ಹಣ ಹಿಂದೆ ಪಡೆಯುವುದು ಸಾಧ್ಯವಿರಲಿಲ್ಲ. ಹುದ್ದೆ ತೊರೆದ ದಿನ ನಮೂದಿಸುವ ಮೊದಲು ಕಂಪನಿಯೇ ಮಾಹಿತಿ ನವೀಕರಿಸಿದೆಯೇ ಎನ್ನುವುದನ್ನೂ ತಿಳಿದುಕೊಳ್ಳಬೇಕು ಎಂದೂ ಉದ್ಯೋಗಿಗಳಿಗೆ ಸಲಹೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.