ನವದೆಹಲಿ: ನೌಕರರ ಭವಿಷ್ಯನಿಧಿ ಸಂಘಟನೆಯ (ಇಪಿಎಫ್‌ಒ) ಸದಸ್ಯರು ತಮ್ಮ ಭವಿಷ್ಯನಿಧಿಯಲ್ಲಿನ (ಇಪಿಎಫ್) ಹಣವನ್ನು ಎಟಿಎಂ ಮೂಲಕ ಹಿಂದಕ್ಕೆ ಪಡೆಯುವ ಸೌಲಭ್ಯವು ಶೀಘ್ರವೇ ಕಾರ್ಯರೂಪಕ್ಕೆ ಬರಲಿದೆ.
ಸದಸ್ಯರು ತಮ್ಮ ಬ್ಯಾಂಕ್ ಖಾತೆಯನ್ನು ಇಪಿಎಫ್ ಖಾತೆಗೆ ಜೋಡಿಸಿ, ಯುಪಿಐ ಮೂಲಕ ಹಣ ಹಿಂಪಡೆಯುವ ಸೌಲಭ್ಯ ಕೂಡ ಜಾರಿಗೆ ಬರಲಿದೆ.
ಇಪಿಎಫ್ ಖಾತೆಯಲ್ಲಿ ಇರುವ ಹಣದಲ್ಲಿ ಒಂದಿಷ್ಟು ಮೊತ್ತವನ್ನು ಹಾಗೆಯೇ ಉಳಿಸಿಕೊಂಡು, ಇನ್ನುಳಿದ ಮೊತ್ತವನ್ನು ಯುಪಿಐ ಅಥವಾ ಎಟಿಎಂ ಕಾರ್ಡ್ ಬಳಸಿ ಬ್ಯಾಂಕ್ ಖಾತೆ ಮೂಲಕ ಹಿಂದಕ್ಕೆ ಪಡೆಯುವ ಸೌಲಭ್ಯವನ್ನು ಜಾರಿಗೆ ತರಲು ಕೇಂದ್ರ ಕಾರ್ಮಿಕ ಸಚಿವಾಲಯ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಉನ್ನತ ಮೂಲಗಳು ಹೇಳಿವೆ.
ಈ ವ್ಯವಸ್ಥೆ ಜಾರಿಗೆ ತರುವಲ್ಲಿ ಕೆಲವು ತಂತ್ರಾಂಶ ಸಂಬಂಧಿ ಸಮಸ್ಯೆಗಳು ಇವೆ. ಈ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ನಡೆದಿದೆ ಎಂದು ಗೊತ್ತಾಗಿದೆ. ಈಗಿರುವ ವ್ಯವಸ್ಥೆಯಲ್ಲಿ ಇಪಿಎಫ್‌ಒ ಸದಸ್ಯರು ತಮ್ಮ ಹಣವನ್ನು ಹಿಂದಕ್ಕೆ ಪಡೆಯಲು ಅರ್ಜಿಯೊಂದನ್ನು ಸಲ್ಲಿಸಬೇಕು. ಈ ಪ್ರಕ್ರಿಯೆಯು ಬಹಳ ಸಮಯ ತೆಗೆದುಕೊಳ್ಳುತ್ತಿದೆ.
ಸ್ವಯಂಚಾಲಿತ ಇತ್ಯರ್ಥ ವ್ಯವಸ್ಥೆಯ ಅಡಿಯಲ್ಲಿ, ಹಣ ಹಿಂಪಡೆಯುವ ಮನವಿಗಳನ್ನು ಮೂರು ದಿನಗಳಲ್ಲಿ ಇತ್ಯರ್ಥಪಡಿಸಲಾಗುತ್ತಿದೆ. ಈ ವ್ಯವಸ್ಥೆಯ ಅಡಿ ₹1 ಲಕ್ಷ ಹಿಂಪಡೆಯಲು ಇದ್ದ ಅವಕಾಶವನ್ನು ಮಂಗಳವಾರದಿಂದ ₹5 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಇಪಿಎಫ್‌ಒ ಸದಸ್ಯರು ತಮ್ಮ ಪಿಎಫ್ ಖಾತೆಯಿಂದ ಹಣವನ್ನು ನೇರವಾಗಿ ಹಿಂದಕ್ಕೆ ಪಡೆಯುವ ಅವಕಾಶ ಕಲ್ಪಿಸಲು ಆಗದು ಎಂದು ಮೂಲಗಳು ಹೇಳಿವೆ. ಏಕೆಂದರೆ ಈ ಸೌಲಭ್ಯ ಕಲ್ಪಿಸಲು ಅಗತ್ಯವಿರುವ ಬ್ಯಾಂಕಿಂಗ್ ಪರವಾನಗಿಯು ಇಪಿಎಫ್‌ಒ ಬಳಿ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.