ADVERTISEMENT

ಲಾಕ್‌ಡೌನ್:‌ ಪಿಎಫ್‌ ಹಿಂದೆ ಪಡೆದ ಮೊತ್ತ ₹ 280 ಕೋಟಿ

1.37 ಲಕ್ಷ ವಿತ್‌ಡ್ರಾವಲ್‌ ಕ್ಲೇಮ್ಸ್‌ ಇತ್ಯರ್ಥ

ಪಿಟಿಐ
Published 10 ಏಪ್ರಿಲ್ 2020, 20:37 IST
Last Updated 10 ಏಪ್ರಿಲ್ 2020, 20:37 IST
   

ನವದೆಹಲಿ: ದಿಗ್ಬಂಧನದಿಂದಾಗಿ ಹಣಕಾಸು ಸಂಕಷ್ಟಕ್ಕೆ ಸಿಲುಕಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಸದಸ್ಯರ 1.37 ಲಕ್ಷ ಮನವಿಗಳನ್ನು ಕಳೆದ 10 ದಿನಗಳಲ್ಲಿ ಪುರಸ್ಕರಿಸಿ ₹ 280 ಕೋಟಿ ವಿತರಿಸಲಾಗಿದೆ.

‘ಕೋವಿಡ್‌–19‘ ಪಿಡುಗಿನ ಸಂದರ್ಭದಲ್ಲಿ ಎದುರಾಗುವ ಹಣಕಾಸಿನ ತುರ್ತು ಅಗತ್ಯಗಳನ್ನು ಪೂರೈಸಿಕೊಳ್ಳಲು ಭವಿಷ್ಯ ನಿಧಿ ಖಾತೆಯಲ್ಲಿನ (ಪಿಎಫ್‌) ಹಣ ಹಿಂದೆ ಪಡೆಯಲು ಕಾರ್ಮಿಕ ಸಚಿವಾಲಯವು ವಿಶೇಷ ಸೌಲಭ್ಯ ಕಲ್ಪಿಸಿದೆ. ಇದರಡಿ ಸದಸ್ಯರು ತಮ್ಮ ‘ಪಿಎಫ್‌’ ಖಾತೆಯಲ್ಲಿನ ಶೇ 75ರಷ್ಟು ಇಲ್ಲವೇ ತಮ್ಮ ಮೂಲ ವೇತನ ಮತ್ತು ತುಟ್ಟಿ ಭತ್ಯೆಯ ಮೂರು ತಿಂಗಳ ಮೊತ್ತದಲ್ಲಿ ಯಾವುದು ಕಡಿಮೆ ಇರುವುದೋ ಅದನ್ನು ಹಿಂದೆ ಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ.ಸದಸ್ಯರು ಈ ಮಿತಿಗಿಂತ ಕಡಿಮೆ ಮೊತ್ತಕ್ಕೂ ಅರ್ಜಿ ಸಲ್ಲಿಸಬಹುದಾಗಿದೆ. ಹೀಗೆ ಪಡೆದ ಮೊತ್ತವನ್ನು ಪಿಎಫ್‌ ಖಾತೆಗೆ ಮರುಪಾವತಿಸುವ ಅಗತ್ಯ ಇರುವುದಿಲ್ಲ. ಈ ಮೊತ್ತಕ್ಕೆ ಆದಾಯ ತೆರಿಗೆಯೂ ಅನ್ವಯವಾಗುವುದಿಲ್ಲ. ಹಣ ಹಿಂದೆ ಪಡೆಯಲು ಸದಸ್ಯರು ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬಹುದಾಗಿದೆ.

ಕಳೆದ 10 ದಿನಗಳಲ್ಲಿ 1.37 ಲಕ್ಷ ಮನವಿಗಳನ್ನು ಪರಿಗಣಿಸಿ ಇತ್ಯರ್ಥಪಡಿಸಲಾಗಿದೆ. ಸದಸ್ಯರ ಬ್ಯಾಂಕ್‌ ಖಾತೆಗೆ ಹಣ ಪಾವತಿಯಾಗುತ್ತಿದೆ. ‘ಕೆವೈಸಿ‘ ನಿಯಮ ಪೂರೈಸಿದ ಅರ್ಜಿಗಳನ್ನೆಲ್ಲ ಸ್ವಯಂಚಾಲಿತವಾಗಿ ಇತ್ಯರ್ಥಪಡಿಸಲಾಗುತ್ತಿದೆ.

ADVERTISEMENT

‘ಕೆವೈಸಿ’ ಅಗತ್ಯ ಪೂರೈಸುವುದಕ್ಕೆ ಜನ್ಮ ದಿನಾಂಕ ತಿದ್ದುಪಡಿ ಮಾಡಲು ಪುರಾವೆಯಾಗಿ ಆಧಾರ್‌ ಪರಿಗಣಿಸಲೂ ಅವಕಾಶ ಕಲ್ಪಿಸಿಕೊಡಲಾಗಿದೆ. ಜನ್ಮ ದಿನಾಂಕದಲ್ಲಿ ಮೂರು ವರ್ಷಗಳ ವ್ಯತ್ಯಾಸ ಇರುವ ಪ್ರಕರಣಗಳನ್ನು ಸ್ವೀಕರಿಸಲು ಸಂಘಟನೆಯು ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.