ADVERTISEMENT

ಪೆಟ್ರೋಲ್, ಡೀಸೆಲ್ ಮೇಲಿನ ಎಕ್ಸೈಸ್ ಸುಂಕ ₹5, ₹10ರಷ್ಟು ಕಡಿತಗೊಳಿಸಿದ ಕೇಂದ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ನವೆಂಬರ್ 2021, 19:21 IST
Last Updated 3 ನವೆಂಬರ್ 2021, 19:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಜನರ ಹಾಗೂ ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದಿರುವ ಕೇಂದ್ರ ಸರ್ಕಾರವು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಲೀಟರಿಗೆ ₹10, ಪೆಟ್ರೋಲ್ ಮೇಲಿನ ಎಕ್ಸೈಸ್ ಸುಂಕವನ್ನು ಲೀಟರಿಗೆ ₹5 ತಗ್ಗಿಸಿದೆ. ಇದರ ಬೆನ್ನಿಗೇ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಲೀಟರಿಗೆ ತಲಾ ₹7 ಕಡಿಮೆ ಮಾಡಲು ರಾಜ್ಯ ಸರ್ಕಾರವೂ ತೀರ್ಮಾನಿಸಿದೆ.

ತನ್ನ ತೀರ್ಮಾನವು ಗುರುವಾರದಿಂದ ಅನ್ವಯವಾಗಲಿದೆ ಎಂದು ಕೇಂದ್ರ ಹೇಳಿದೆ. ರಾಜ್ಯ ಸರ್ಕಾರದ ತೀರ್ಮಾನವು ಗುರುವಾರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ. ರಾಜ್ಯ ಹಾಗೂ ಕೇಂದ್ರದ ತೀರ್ಮಾನಗಳು ಜಾರಿಗೊಂಡ ನಂತರ, ‘ರಾಜ್ಯದಲ್ಲಿ ಲೀಟರ್‌ ಪೆಟ್ರೋಲ್ ಬೆಲೆ ಅಂದಾಜು ₹95.50 ಹಾಗೂ ಲೀಟರ್ ಡೀಸೆಲ್ ಬೆಲೆ ₹ 81.50 ಆಗುವ ನಿರೀಕ್ಷೆ ಇದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸರ್ಕಾರಗಳು ಕೈಗೊಂಡಿರುವ ಈ ನಿರ್ಧಾರವು ಹಣದುಬ್ಬರದ ಬಿಸಿ ಅನುಭವಿಸುತ್ತಿರುವ ಜನಸಾಮಾನ್ಯರಿಗೆ ತುಸು ಸಮಾಧಾನ ನೀಡಲಿದೆ.

ADVERTISEMENT

‘ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರ ಎಕ್ಸೈಸ್ ಸುಂಕವನ್ನು ತಗ್ಗಿಸುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಬುಧವಾರ ರಾತ್ರಿ ಪ್ರಕಟಣೆ ಹೊರಡಿಸಿದೆ. ರಾಜ್ಯಗಳು ಕೂಡ ಮೌಲ್ಯವರ್ಧಿತ ತೆರಿಗೆ ಪ್ರಮಾಣವನ್ನು ತಗ್ಗಿಸಬೇಕು ಎಂದು ಅದು ಸಲಹೆ ನೀಡಿತ್ತು. ಇದಾದ ಕೆಲವೇ ಹೊತ್ತಿನಲ್ಲಿ ಟ್ವೀಟ್ ಮಾಡಿದ ಬೊಮ್ಮಾಯಿ ಅವರು, ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದರು.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಈ ನಿರ್ಧಾರವು ಹಣದುಬ್ಬರದ ಬಿಸಿ ಅನುಭವಿಸುತ್ತಿರುವ ಜನಸಾಮಾನ್ಯರಿಗೆ ತುಸು ಸಮಾಧಾನ ನೀಡಲಿದೆ.

ಇದು ತೈಲೋತ್ಪನ್ನಗಳ ಎಕ್ಸೈಸ್‌ ಸುಂಕದಲ್ಲಿ ಇದುವರೆಗೆ ಆಗಿರುವ ಅತಿದೊಡ್ಡ ಕಡಿತ. 2020ರ ಮಾರ್ಚ್‌–ಮೇ ನಡುವೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಕ್ರಮವಾಗಿ ₹13 ಹಾಗೂ ₹16ರಷ್ಟು ಏರಿಸಲಾಗಿತ್ತು. ಈ ಏರಿಕೆಯ ನಂತರ ಪೆಟ್ರೋಲ್ ಮೇಲಿನ ಕೇಂದ್ರದ ತೆರಿಗೆಗಳು ಲೀಟರಿಗೆ ₹32.9ಕ್ಕೆ ಹಾಗೂ ಡೀಸೆಲ್ ಮೇಲಿನ ಕೇಂದ್ರದ ತೆರಿಗೆಗಳು ಲೀಟರಿಗೆ ₹31.8ಕ್ಕೆ ತಲುಪಿದ್ದವು.

ರಾಜ್ಯಗಳು ಕೂಡ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್‌) ಕಡಿಮೆ ಮಾಡಿ, ಗ್ರಾಹಕರ ಮೇಲಿನ ಹೊರೆ ತಗ್ಗಿಸಬೇಕು ಎಂದು ಹಣಕಾಸು ಸಚಿವಾಲಯ ಸಲಹೆ ಮಾಡಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಹೆಚ್ಚಳವಾದ ಪರಿಣಾಮವಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದವು. ಪೆಟ್ರೋಲ್ ಬೆಲೆಯು ದೇಶದ ಬಹುತೇಕ ಕಡೆಗಳಲ್ಲಿ ಲೀಟರಿಗೆ ₹100ರ ದಾಟಿದೆ. ಡೀಸೆಲ್ ಬೆಲೆ ಕೂಡ ಹಲವು ಕಡೆಗಳಲ್ಲಿ ₹100ಕ್ಕಿಂತ ಹೆಚ್ಚಾಗಿದೆ.

2020ರ ಮೇ 5ರ ನಂತರ ಎಕ್ಸೈಸ್‌ ಸುಂಕ ಹೆಚ್ಚು ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದ ನಂತರದಲ್ಲಿ ಪೆಟ್ರೋಲ್ ಬೆಲೆಯು ಲೀಟರಿಗೆ ₹38.78ರಷ್ಟು, ಡೀಸೆಲ್ ಬೆಲೆಯು ₹29.03ರಷ್ಟು ಹೆಚ್ಚಾಗಿತ್ತು. ಕೇಂದ್ರವು ಎಕ್ಸೈಸ್‌ ಸುಂಕವನ್ನು ತಗ್ಗಿಸಬೇಕು ಎಂದು ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳು ಒತ್ತಾಯಿಸಿದ್ದವು.

₹ 8,700 ಕೋಟಿ ಎಕ್ಸೈಸ್ ಸುಂಕ ಕಡಿತದಿಂದ ಕೇಂದ್ರಕ್ಕೆ ಮಾಸಿಕ ವರಮಾನ ನಷ್ಟ

₹ 1 ಲಕ್ಷ ಕೋಟಿಗಿಂತ ಜಾಸ್ತಿ ಕೇಂದ್ರಕ್ಕೆ ಆಗಲಿರುವ ವಾರ್ಷಿಕ ವರಮಾನ ನಷ್ಟ

₹ 2,100 ಕೋಟಿ ತೆರಿಗೆ ಇಳಿಕೆ ತೀರ್ಮಾನದಿಂದ ರಾಜ್ಯದ ಬೊಕ್ಕಸಕ್ಕೆ ಆಗಲಿರುವ ಅಂದಾಜು ನಷ್ಟ

₹ 95.50 ಪರಿಷ್ಕರಣೆ ಬಳಿಕ ರಾಜ್ಯದಲ್ಲಿ ಪೆಟ್ರೋಲ್‌ ಬೆಲೆ

₹ 81.50 ಪರಿಷ್ಕರಣೆ ಬಳಿಕ ರಾಜ್ಯದಲ್ಲಿ ಡೀಸೆಲ್ ಬೆಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.