
ನವದೆಹಲಿ: ದೇಶದ ರಫ್ತು ವಲಯಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ₹45 ಸಾವಿರ ಕೋಟಿ ವೆಚ್ಚದ ಎರಡು ಯೋಜನೆಗಳಿಗೆ ಅನುಮೋದನೆ ನೀಡಿರುವುದರಿಂದ ದೇಶದ ರಫ್ತು ವಲಯ ಸದೃಢಗೊಳ್ಳಲಿದೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ದೇಶದ ರಫ್ತು ವಲಯದ ಸ್ಪರ್ಧಾತ್ಮಕತೆ ಹೆಚ್ಚಲಿದೆ ಎಂದು ರಫ್ತುದಾರರು ಹೇಳಿದ್ದಾರೆ.
ರಫ್ತು ಉತ್ತೇಜನಾ ಮಿಷನ್‌ಗೆ ₹25,060 ಕೋಟಿ ಮತ್ತು ಸಾಲ ಖಾತರಿ ಯೋಜನೆಗೆ ₹20 ಸಾವಿರ ಕೋಟಿ ಮೊತ್ತ ವಿನಿಯೋಗಿಸಲು ಕೇಂದ್ರ ಸಚಿವ ಸಂಪುಟವು ಬುಧವಾರ ಒಪ್ಪಿದೆ. ಈ ಯೋಜನೆಗಳಿಂದ ಉದ್ಯಮಗಳಿಗೆ ಸಾಲವು ಕೈಗೆಟಕುವಂತಾಗಲಿದೆ ಎಂದು ರಫ್ತುದಾರರು ತಿಳಿಸಿದ್ದಾರೆ.
‘ಸರ್ಕಾರದ ಈ ಕ್ರಮವು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು (ಎಂಎಸ್ಎಂಇ), ಮೊದಲ ಬಾರಿಗೆ ರಫ್ತು ಮಾಡುವವರ ಕೈ ಬಲಪಡಿಸುವ ಉದ್ದೇಶ ಹೊಂದಿದೆ’ ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ರಫ್ತು ವಿಭಾಗದ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಸಂಜಯ್ ಬುಧಿಯಾ ಹೇಳಿದ್ದಾರೆ.
‘ಕೇಂದ್ರ ಸರ್ಕಾರ ಈ ಯೋಜನೆಗಳಿಗೆ ಒಪ್ಪಿಗೆ ನೀಡಿರುವುದರಿಂದ ಉದ್ಯಮಗಳಿಗೆ ಹಣಕಾಸಿನ ನೆರವು ದೊರೆಯಲಿದೆ. ದೇಶದ ರಫ್ತು ವ್ಯವಸ್ಥೆ ಸದೃಢಗೊಳ್ಳಲಿದ್ದು, ಅಗಾಧ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಆಗಲಿದೆ’ ಎಂದು ಸಿದ್ಧ ಉಡುಪು ರಫ್ತು ಉತ್ತೇಜನ ಮಂಡಳಿಯ (ಎಇಪಿಸಿ) ಉಪಾಧ್ಯಕ್ಷ ಎ. ಶಕ್ತಿವೇಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.