ADVERTISEMENT

18 ವರ್ಷಗಳ ಬಳಿಕ ಆಮದು ವೆಚ್ಚಕ್ಕಿಂತ ರಫ್ತು ಮೌಲ್ಯ ಹೆಚ್ಚಳ!

ಪಿಟಿಐ
Published 15 ಜುಲೈ 2020, 20:56 IST
Last Updated 15 ಜುಲೈ 2020, 20:56 IST
ರಫ್ತು
ರಫ್ತು   

ನವದೆಹಲಿ: 18 ವರ್ಷಗಳಲ್ಲಿ ಇದೇ ಮೊದಲ ಬಾರಿಗೆಜೂನ್‌ನಲ್ಲಿ ದೇಶದ ರಫ್ತು ವಹಿವಾಟು ಮೌಲ್ಯವು ಆಮದು ವೆಚ್ಚಕ್ಕಿಂತಲೂ ಸ್ವಲ್ಪ ಏರಿಕೆ ಕಂಡಿದೆ.

ರಫ್ತು ವಹಿವಾಟಿನ ಮೌಲ್ಯ ₹ 1,64,325 ಕೋಟಿ ಆಗಿದೆ. ಆಮದು ವಹಿವಾಟಿನ ವೆಚ್ಚ ₹1,58,325 ಆಗಿದೆ. ಅಂದರೆ ರಫ್ತು ಮೌಲ್ಯ ₹ 6 ಸಾವಿರ ಕೋಟಿ ಹೆಚ್ಚಾಗಿದೆ. ಈ ಹಿಂದೆ 2002ರಲ್ಲಿ ರಫ್ತು ವಹಿವಾಟಿನ ಮೌಲ್ಯವು ಆಮದು ವೆಚ್ಚಕ್ಕಿಂತಲೂ ₹75 ಕೋಟಿ ಹೆಚ್ಚಿಗೆ ಆಗಿತ್ತು.

ರಫ್ತು ಮತ್ತು ಆಮದು ವಹಿವಾಟು ಸತತ ನಾಲ್ಕನೇ ತಿಂಗಳಿನಲ್ಲಿಯೂ ಇಳಿಕೆ ಕಂಡಿವೆ. ಜೂನ್‌ನಲ್ಲಿ ರಫ್ತು ಶೇ 12.41ರಷ್ಟು ಇಳಿಕೆ ಕಂಡಿದ್ದರೆ, ಆಮದು ವಹಿವಾಟು ಶೇ 47.59 ರಷ್ಟು ಕಡಿಮೆಯಾಗಿದೆ. ತೈಲ ಆಮದು ಶೇ 55 ರಷ್ಟು ಚಿನ್ನದ ಆಮದು ಶೇ 77ರಷ್ಟು ಇಳಿಕೆಯಾಗಿದೆ.

ADVERTISEMENT

ರಫ್ತು ವಲಯದಲ್ಲಿ ಹರಳು ಮತ್ತು ಚಿನ್ನಾಭರಣ, ಚರ್ಮೋದ್ಯಮ, ಪೆಟ್ರೋಲಿಯಂ ಉತ್ಪನ್ನಗಳು, ಎಂಜಿನಿಯರಿಂಗ್‌ ಸರಕುಗಳು, ಸಿದ್ಧ ಉಡುಪು ನಕಾರಾತ್ಮಕ ಬೆಳವಣಿಗೆ ಕಂಡಿವೆ. ಆಮದು ವಹಿವಾಟಿಗೆ ಸಂಬಂಧಿಸಿದಂತೆ ಚಿನ್ನ, ಬೆಳ್ಳಿ, ಕಲ್ಲಿದ್ದಲು, ರಸಗೊಬ್ಬರ, ಮಷಿನರಿ, ಮಷಿನ್‌ ಟೂಲ್ಸ್‌ ನಕಾರಾತ್ಮಕ ಬೆಳವಣಿಗೆ ಕಂಡಿವೆ.

‘ಬಹಳಷ್ಟು ಕೆಲಸಗಾರರು ಕೆಲಸಕ್ಕೆ ಮರಳುತ್ತಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ತಯಾರಿಕಾ ವಲಯದ ಚಟುವಟಿಕೆ ಸಹಜ ಸ್ಥಿತಿಯತ್ತ ಬರುತ್ತಿದ್ದು, ಜಾಗತಿಕ ಬೇಡಿಕೆಯನ್ನು ತಲುಪಲು ಉದ್ಯಮವು ಸಜ್ಜಾಗುತ್ತಿದೆ’ ಎಂದು ವ್ಯಾಪಾರ ಉತ್ತೇಜನಾ ಸಮಿತಿಯ ಅಧ್ಯಕ್ಷ ಮೋಹಿತ್‌ ಸಿಂಗ್ಲಾ ಹೇಳಿದ್ದಾರೆ.

ವಿದೇಶಿ ವ್ಯಾಪಾರ (ಏಪ್ರಿಲ್‌–ಜೂನ್‌)
37%:
ರಫ್ತು ಇಳಿಕೆ
52%:ಆಮದು ಇಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.