ADVERTISEMENT

ರಫ್ತು, ಬಳಕೆ ಹೆಚ್ಚಳ: ಕಾಫಿ ಮಾರುಕಟ್ಟೆಗೆ ಚೇತರಿಕೆ ಕಾಲ, ಬೆಳೆಗಾರರಿಗೆ ವರದಾನ

ಅದಿತ್ಯ ಕೆ.ಎ.
Published 6 ಜೂನ್ 2022, 19:31 IST
Last Updated 6 ಜೂನ್ 2022, 19:31 IST
ಕಾಫಿ ಬೆಳೆ (ಸಂಗ್ರಹ ಚಿತ್ರ)
ಕಾಫಿ ಬೆಳೆ (ಸಂಗ್ರಹ ಚಿತ್ರ)   

ಬೆಂಗಳೂರು: ಕಾಫಿಯ ರಫ್ತು ಹಾಗೂ ಬಳಕೆ ಪ್ರಮಾಣ ಹೆಚ್ಚಳವಾಗಿದ್ದು ಕಾಫಿ ಧಾರಣೆಯು ಏರುಗತಿಯಲ್ಲಿದೆ. ‘ದರ ಹೆಚ್ಚಳದಿಂದ ದೇಶದಲ್ಲಿ ಕಾಫಿ ವಹಿವಾಟು ₹ 5 ಸಾವಿರ ಕೋಟಿಯಿಂದ ₹ 7 ಸಾವಿರ ಕೋಟಿಗೆ ಈ ವರ್ಷ ಏರಿಕೆಯಾಗಿದೆ’ ಎಂದು ಕಾಫಿ ಬೆಳೆಗಾರರು ಸಂತಸ ವ್ಯಕ್ತಪಡಿಸಿದ್ದಾರೆ.

ಕೋವಿಡ್‌ನಿಂದ ಎರಡು ವರ್ಷ ರಫ್ತು ಕುಸಿದಿತ್ತು. ಸ್ಥಳೀಯ ವ್ಯಾಪಾರಸ್ಥರು ಕಾಫಿ ಖರೀದಿಗೆ ಅಷ್ಟಾಗಿ ಆಸಕ್ತಿ ತೋರುತ್ತಿರಲಿಲ್ಲ. ಈಗ ಕಾಫಿ ಬೆಲೆ ಏರಿಕೆಯಿಂದ ಖರೀದಿದಾರರು ಆಸಕ್ತಿ ತೋರುತ್ತಿದ್ದರೂ ಕಾಫಿ ದಾಸ್ತಾನು ಬಹುತೇಕ ಖಾಲಿಯಾಗಿದೆ. ಮೂರು ವರ್ಷ ವಾಡಿಕೆಗೂ ಅಧಿಕವಾಗಿ ಸುರಿದ ಮಳೆಯಿಂದ ಫಸಲು ಕಡಿಮೆಯಾಗಿತ್ತು.

ನಾಲ್ಕು ತಿಂಗಳ ಹಿಂದೆ ಅರೇಬಿಕಾ ಕಾಫಿಯ 50 ಕೆ.ಜಿ ಪಾರ್ಚ್‌ಮೆಂಟ್‌ ಬೆಲೆ ₹ 17 ಸಾವಿರ ಆಗಿತ್ತು. ಈಗ ಅದು ₹ 16,750 ಆಗಿದೆ. ದರ ಏರಿಕೆಯಿಂದ ಸಂತಸಗೊಂಡಿದ್ದ ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಭಾಗದ ಬೆಳೆಗಾರರು, ಪೂರ್ಣ ಕಾಫಿ ಮಾರಾಟ ಮಾಡಿದ್ದರು. ಆದರೆ, ರೋಬಸ್ಟಾ ಕಾಫಿ ಬೆಲೆ ಏರಿಕೆಯಾಗದೆ ಬೆಳೆಗಾರರು ಹತಾಶಗೊಂಡಿದ್ದರು. ಈಗ ರೊಬಸ್ಟಾ ಪಾರ್ಚ್‌ಮೆಂಟ್‌ನ ದರವು ಮೊದಲ ಬಾರಿಗೆ ₹ 10 ಸಾವಿರ (50 ಕೆ.ಜಿಯ ಚೀಲ) ತಲುಪಿದ್ದು, ಬೆಳೆಗಾರರಲ್ಲಿ ಸಂತಸ ಮೂಡಿಸಿದೆ. ರೊಬಸ್ಟಾ ಚೆರ್‍ರಿಯ ದರವು ₹ 4,700 –₹ 4,900ರ (50 ಕೆ.ಜಿ) ಆಸುಪಾಸಿನಲ್ಲಿದೆ.

ADVERTISEMENT

‘ಭಾರತದ ಕಾಫಿಯು ಐರೋಪ್ಯ ಮಾರುಕಟ್ಟೆಗೆ ಹೆಚ್ಚಾಗಿ ರಫ್ತು ಆಗುತ್ತಿದೆ’ ಎಂದು ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದ ಪದಾಧಿಕಾರಿ ವಿಶ್ವನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

*
ರೋಬಸ್ಟಾ ಕಾಫಿಯನ್ನು ಗೋದಾಮು ಅಥವಾ ಕಾಫಿ ಕ್ಯೂರಿಂಗ್‌ಗಳಲ್ಲಿ ದಾಸ್ತಾನು ಮಾಡಿದ್ದವರಿಗೆ ಬೆಲೆ ಏರಿಕೆ ಲಾಭ ದೊರೆಯುತ್ತಿದೆ.
-ವಿಶ್ವನಾಥ್‌, ಪದಾಧಿಕಾರಿ, ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.