ಪೀಯೂಷ್ ಗೋಯಲ್
–ಪಿಟಿಐ ಚಿತ್ರ
ನವದೆಹಲಿ: ಜಾಗತಿಕ ಸವಾಲುಗಳ ನಡುವೆಯೂ ಪ್ರಸಕ್ತ ಹಣಕಾಸು ವರ್ಷದ ಜೂನ್ ತ್ರೈಮಾಸಿಕದಲ್ಲಿ ದೇಶದ ರಫ್ತು ವಹಿವಾಟು ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.
ಸೇವಾ ವಲಯದ ಬೆಳವಣಿಗೆಯು ಒಟ್ಟಾರೆ ರಫ್ತು ಪ್ರಮಾಣದ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಮೇ ತಿಂಗಳಲ್ಲಿ ಸರಕುಗಳ ರಫ್ತು ಮೌಲ್ಯವು ₹3.18 ಲಕ್ಷ ಕೋಟಿ ಆಗಿದ್ದು, ಶೇ 9.1ರಷ್ಟು ಏರಿಕೆಯಾಗಿದೆ. ಏಪ್ರಿಲ್–ಮೇ ಅವಧಿಯಲ್ಲಿ ಸಾಗಣೆಯ ಒಟ್ಟು ಮೊತ್ತ ₹6.10 ಲಕ್ಷ ಕೋಟಿಯಾಗಿದ್ದು, ಶೇ 5.1ರಷ್ಟು ಬೆಳವಣಿಗೆ ದಾಖಲಿಸಿದೆ.
ರಷ್ಯಾ–ಉಕ್ರೇನ್, ಇಸ್ರೇಲ್–ಹಮಾಸ್ ಯುದ್ಧ, ಕೆಂಪು ಸಮುದ್ರ ಬಿಕ್ಕಟ್ಟಿನ ನಡುವೆಯೂ ದೇಶದ ರಫ್ತು ಸದೃಢವಾಗಿದೆ. ಜೊತೆಗೆ ಸೇವಾ ವಲಯದ ಬೆಳವಣಿಗೆಯು ವೇಗ ಪಡೆದಿದೆ ಎಂದು ಹೇಳಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಸರಕು ಮತ್ತು ಸೇವಾ ರಫ್ತು ₹66.81 ಲಕ್ಷ ಕೋಟಿ ದಾಟುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ. 2023–24ನೇ ಹಣಕಾಸು ವರ್ಷದಲ್ಲಿ ರಫ್ತು ಮೌಲ್ಯ ₹64.99 ಲಕ್ಷ ಕೋಟಿ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.