ADVERTISEMENT

ಸುಳ್ಳು ಸುದ್ದಿಗೆ ಕಿವಿಗೊಡಬೇಡಿ

ಪೃಥ್ವಿರಾಜ್ ಎಂ ಎಚ್
Published 11 ಡಿಸೆಂಬರ್ 2018, 19:30 IST
Last Updated 11 ಡಿಸೆಂಬರ್ 2018, 19:30 IST
   

ಸುಳ್ಳು ಸುದ್ದಿ, ನಕಲಿ ಮಾಹಿತಿಗೆ ಕಡಿವಾಣ ಹಾಕಲು, ಮೆಸೇಜಿಂಗ್ ತಂತ್ರಾಂಶ ವಾಟ್ಸ್‌ಆ್ಯಪ್‌, ‘ಖುಷಿ ಹಂಚಿರಿ, ಗಾಳಿ ಸುದ್ದಿ ಹಂಚಬೇಡಿ’ ಎಂಬ ಸಂದೇಶದೊಂದಿಗೆ ಪತ್ರಿಕೆ, ರೇಡಿಯೊ, ಟಿ.ವಿಗಳಲ್ಲಿ ಜಾಹೀರಾತು ನೀಡುತ್ತಿದ್ದರೂ ನಕಲಿ ಸುದ್ದಿಗಳ ಆರ್ಭಟಕ್ಕೆ ಕಡಿವಾಣ ಬಿದ್ದಿಲ್ಲ.

ಸಾಮಾಜಿಕ ಮಾಧ್ಯಮಗಳು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರೂ ಸುಳ್ಳು ಸುದ್ದಿಗಳನ್ನು ನಂಬಿ ಅಪಾಯದ ಸುಳಿಗೆ ಸಿಲುಕುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಡಿಸ್ಕೌಂಟ್ ಆಫರ್‌ಗಳೆಂದು ವಾಟ್ಸ್‌ಆ್ಯಪ್‌ನಲ್ಲಿ ಬರುವ ಸಂದೇಶಗಳಿಗೆ ಜನ ಹೆಚ್ಚು ಗಮನ ಕೊಡುತ್ತಿದ್ದಾರೆ. ಇವೆಲ್ಲಾ ನಿಮ್ಮ ಖಾತೆಗೆ ಕನ್ನ ಹಾಕುವ ಸಂದೇಶಗಳು ಎಂಬುದು ನೆನಪಿರಲಿ.

ಪಾದರಕ್ಷೆ (ಶೂ) ತಯಾರಿಕಾ ಕಂಪನಿಯು ವಾರ್ಷಿಕೋತ್ಸವ ಅಂಗವಾಗಿ ₹3,000ಕ್ಕೇ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ ಎಂಬ ಸಂದೇಶವೊಂದು ಹರಿದಾಡುತ್ತಿದೆ. ಈ ಸಂದೇಶದಲ್ಲಿ ‘ಫಿಷಿಂಗ್ ಲಿಂಕ್‌’ಗಳಿದ್ದು, ಮುಟ್ಟಿದರೆ ನಿಮ್ಮ ಖಾತೆಗೆ ಕನ್ನ ಬೀಳುವ ಸಾಧ್ಯತೆ ಇದೆ.

ADVERTISEMENT

ಪ್ರಮುಖ ಇ–ಕಾಮರ್ಸ್ ಸಂಸ್ಥೆಯೊಂದು ‘ಬಿಗ್ ಬಿಲಿಯನ್ ಸೇಲ್‌’ ಹೆಸರಿನಲ್ಲಿ ದುಬಾರಿ ವಸ್ತುಗಳನ್ನು ಕೇವಲ ₹10, ₹20, ₹50ಕ್ಕೆಲ್ಲಾ ಮಾರಾಟ ಮಾಡುತ್ತಿದೆ ಎಂಬ ಸಂದೇಶವೂ ಬರುತ್ತಿದೆ. ಖುಷಿಯಿಂದ ಖರೀದಿಸಲು ಮುಂದಾದರೆ, ಈ ಸಂದೇಶವನ್ನು ಕನಿಷ್ಠ ಇಂತಿಷ್ಟು ಜನರೊಂದಿಗೆ ಹಂಚಿಕೊಳ್ಳಬೇಕು ಎಂದು ಸೂಚಿಸಲಾಗುತ್ತಿದೆ. ಇದು ಕೂಡ ಫಿಷಿಂಗ್ ಲಿಂಕ್‌.

ಕೆಲವು ಪಿಜ್ಜಾ ತಯಾರಿಕಾ ಸಂಸ್ಥೆಗಳ ಹೆಸರಿನಲ್ಲೂ ಫಿಷಿಂಗ್ ಮೆಸೇಜ್‌ಗಳು ಬರುತ್ತಿದ್ದು, ಅದರಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಟ್ಟರೆ ಸಾಕು, ವಿವಿಧ ಬಗೆಯ ಪಿಜ್ಜಾಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ ಎಂದು ಗಾಳ ಹಾಕುತ್ತಿದ್ದಾರೆ ಹ್ಯಾಕರ್ಸ್.

ಕೇವಲ ₹999ಕ್ಕೆ ಐಫೋನ್ ಎಂಬ ಸಂದೇಶವೂ ಜೋರಾಗಿಯೇ ಹರಿದಾಡುತ್ತಿದೆ. ಇದರ ಕಡೆಗೆ ಗಮನ ಕೊಡಬೇಡಿ. ಇಂತಹ ಸಂದೇಶ ಕಾಣಿಸಿದ ಕೂಡಲೇ ಡಿಲಿಟ್ ಮಾಡುವುದು ಒಳ್ಳೆಯದು.

ಕ್ರಿಸ್‌ಮಸ್‌ ಕಾರ್ನಿವಲ್ ಸೇಲ್ ಎಂಬ ಹೆಸರಿನಲ್ಲಿ ಇ–ಕಾಮರ್ಸ್ ತಾಣಗಳಲ್ಲಿ ಭಾರಿ ರಿಯಾಯ್ತಿ ಪ್ರಕಟಿಸಲಾಗಿದೆ ಎಂಬ ಸಂದೇಶವೂ ಹರಿದಾಡುತ್ತಿದೆ. ಆಫರ್‌ಗಳ ಮೋಹಕ್ಕೆ ಸಿಲುಕಿ ಲಿಂಕ್‌ ಕ್ಲಿಕ್ಕಿಸಿದರೆ, ನಿಮ್ಮ ಖಾತೆಗಳು ಹ್ಯಾಕ್ ಅಗುವುದರಲ್ಲಿ ಸಂಶಯವಿಲ್ಲ. ಅಪರಿಚಿತ ಸಂಖ್ಯೆಗಳಿಂದ ಬರುವ ಫೋಟೊ, ವಿಡಿಯೊಗಳನ್ನು ನೋಡಲು ಹೋಗಬೇಡಿ. ಇದರಿಂದ ನಿಮ್ಮ ಲೊಕೇಷನ್‌, ಇತರೆ ವಿಷಯಗಳನ್ನು ತಿಳಿದುಕೊಳ್ಳುವ ಸುಲಭ ಮಾರ್ಗವೂ ಇದಾಗಿರುತ್ತದೆ ಎನ್ನುವುದನ್ನು ಮರೆಯಬೇಡಿ.

ವಾಟ್ಸ್‌ಆ್ಯಪ್ ಎಚ್ಚರ
ಕನ್ನ ಹಾಕುವವರ ಜಾಣ್ಮೆ ಹೇಗಿದೆ ಎಂದರೆ, ಇಷ್ಟು ದಿನ ವಾಟ್ಸ್‌ಆ್ಯಪ್‌ ಅನ್ನು ವೇದಿಕೆ ಮಾಡಿಕೊಂಡು ಲಿಂಕ್‌ಗಳನ್ನು ಕಳುಹಿಸುತ್ತಿದ್ದರು, ಈಗ ವಾಟ್ಸ್‌ಆ್ಯಪ್‌ ಅನ್ನೇ ಗಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ವಾಟ್ಸ್‌ಆ್ಯಪ್‌ ಪ್ರೀಮಿಯಂ ವರ್ಷನ್‌ ಲಭ್ಯವಿದೆ. ಅಪ್‌ಡೇಟ್‌ ಮಾಡಿಕೊಂಡರೆ, ವಿಶೇಷ ಸೌಲಭ್ಯಗಳನ್ನು ಪಡೆಯಬಹುದು ಎಂದು ಹೊಂಚು ಹಾಕುತ್ತಿದ್ದಾರೆ. ಅದೇ ರೀತಿ, ವಾಟ್ಸ್‌ ಆ್ಯಪ್‌ ಐಕಾನ್‌, ಹಿಂಬದಿ ಪರದೆಗಳನ್ನು ನೀಲಿ ಬಣ್ಣಕ್ಕೆ, ಚಿನ್ನದ ಬಣ್ಣಕ್ಕೆ ಬದಲಾಯಿಸಿಕೊಳ್ಳಬಹುದು ಎಂಬ ಸಂದೇಶಗಳೂ ಹರಿದಾಡುತ್ತಿದ್ದು, ಅಂತಹ ಲಿಂಕ್‌ಗಳನ್ನು ಮುಟ್ಟದೇ ಇರುವುದು ಒಳ್ಳೆಯದು.

ಸಂದೇಶ ಹಂಚಿಕೊಂಡರೆ ಏನಾದೀತು, ಹೆಚ್ಚೆಂದರೆ ಎಂಬಿಗಳಲ್ಲಿ ಡೇಟಾ ಖರ್ಚಾದೀತು ಎಂದು ಸಮಾಧಾನಪಟ್ಟುಕೊಳ್ಳಬೇಡಿ, ನಿಮ್ಮ ಅಮೂಲ್ಯವಾದ ಸಮಯ ಕೂಡ ವ್ಯರ್ಥವಾಗುತ್ತಿದೆ ಎಂಬುದು ನೆನಪಿರಲಿ. ಇದರಿಂದ ಇತರರ ಸಮಯವೂ ವ್ಯರ್ಥವಾಗುತ್ತದೆ ಎಂಬುದನ್ನು ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.