
ಅನಿಲ್ ಅಂಬಾನಿ
ನವದೆಹಲಿ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆಗೆ ರಿಲಯನ್ಸ್ ಸಮೂಹದ ಮುಖ್ಯಸ್ಥ ಅನಿಲ್ ಅಂಬಾನಿ ಎರಡನೇ ಸಲ ಇಂದು (ಸೋಮವಾರ) ಗೈರಾಗಿದ್ದಾರೆ.
ಶುಕ್ರವಾರ ವಿಚಾರಣೆಗೆ ಗೈರಾದ ಅನಿಲ್ ಅಂಬಾನಿಗೆ ಇಂದು (ನ.17) ಖುದ್ದು ಹಾಜರಾಗುವಂತೆ ಇ.ಡಿ ಮತ್ತೊಂದು ಸಮನ್ಸ್ ನೀಡಿತ್ತು.
ವರ್ಚುವಲ್ ಮೂಲಕ ವಿಚಾರಣೆಗೆ ಹಾಜರಾಗುವುದಾಗಿ ಅನಿಲ್ ಅಂಬಾನಿ ಹೇಳಿಕೊಂಡಿದ್ದರು.
ಆದರೆ ಅನಿಲ್ ಅಂಬಾನಿ ಮನವಿಯನ್ನು ತಿರಸ್ಕರಿಸಿದ್ದ ಇ.ಡಿ ಹೊಸ ಸಮನ್ಸ್ ಜಾರಿಗೊಳಿಸಿತ್ತು. ಇದೀಗ ಇ.ಡಿ ಮೂರನೇ ಸಲ ಸಮನ್ಸ್ ಜಾರಿಗೊಳಿಸುತ್ತದೆಯೇ ಎಂಬುದು ತಿಳಿದು ಬಂದಿಲ್ಲ.
66 ವರ್ಷದ ಅನಿಲ್ ಅಂಬಾನಿ ತನಿಖೆಗೆ ಪೂರ್ಣ ಸಹಕಾರ ನೀಡಲಿದ್ದು, ವರ್ಚುವಲ್ ಆಗಿ ವಿಚಾರಣೆಗೆ ಹಾಜರಾಗಲು ಲಭ್ಯವಿರುತ್ತಾರೆ ಎಂದು ಅವರ ವಕ್ತಾರರು ತಿಳಿಸಿದ್ದಾರೆ.
ಜೈಪುರ-ರೀಂಗಸ್ ಟೋಲ್ ಹೆದ್ದಾರಿ ಯೋಜನೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.