ADVERTISEMENT

ಬ್ಯಾಂಕ್‌ಗಳ ಸಿಬ್ಬಂದಿಗೆ ಗೊತ್ತಿರಬೇಕು ಸ್ಥಳೀಯ ಭಾಷೆ: ಸಚಿವೆ ನಿರ್ಮಲಾ ಆಗ್ರಹ

ಪಿಟಿಐ
Published 7 ನವೆಂಬರ್ 2025, 10:10 IST
Last Updated 7 ನವೆಂಬರ್ 2025, 10:10 IST
<div class="paragraphs"><p>ನಿರ್ಮಲಾ ಸೀತಾರಾಮನ್</p></div>

ನಿರ್ಮಲಾ ಸೀತಾರಾಮನ್

   

ಪಿಟಿಐ ಚಿತ್ರ

ಮುಂಬೈ: ‘ಸಾರ್ವಜನಿಕ ಬ್ಯಾಂಕುಗಳು ತನ್ನ ಗ್ರಾಹಕರೊಂದಿಗೆ ಸಂಪರ್ಕ ಹೆಚ್ಚಿಸುವ ನಿಟ್ಟಿನಲ್ಲಿ ಶಾಖೆಗಳ ಸಿಬ್ಬಂದಿಗೆ ಸ್ಥಳೀಯ ಭಾಷೆ ತಿಳಿದಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು’ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಗ್ರಹಿಸಿದ್ದಾರೆ. 

ADVERTISEMENT

ಎಸ್‌ಬಿಐ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭಾಷೆಯ ವಿಷಯವಾಗಿ ಗ್ರಾಹಕರೊಂದಿಗಿನ ಸಂವಹನ ಕ್ಷೀಣಿಸುತ್ತಿರುವುದರಿಂದ ಕ್ರೆಡಿಟ್ ಮಾಹಿತಿ ಕಂಪನಿಗಳ ಮೇಲಿನ ಅವಲಂಬನೆ ಹೆಚ್ಚಾಗಿದೆ. ಈ ಸಮಸ್ಯೆಯಿಂದಾಗಿ ಮಾಹಿತಿ ದಾಖಲಿಸುವ ಪ್ರಕ್ರಿಯೆಯೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಇದರಿಂದಾಗಿ ಗ್ರಾಹಕರಿಗೆ ಸಾಲ ನೀಡಲು ನಿರಾಕರಿಸುತ್ತಿರುವ ಪ್ರಕರಣಗಳೂ ಹೆಚ್ಚಾಗುತ್ತಿವೆ’ ಎಂದು ಎಚ್ಚರಿಸಿದ್ದಾರೆ.

ಸ್ಥಳೀಯ ಭಾಷೆಗಳನ್ನು ಮಾತನಾಡದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹೊರಹಾಕುತ್ತಿರುವ ಆಕ್ರೋಶ ಕುರಿತು ಮಾತನಾಡಿರುವ ನಿರ್ಮಲಾ ಸೀತಾರಾಮನ್, ‘ಬ್ಯಾಂಕ್ ಸಿಬ್ಬಂದ ನೇಮಕಾತಿ ಪ್ರಕ್ರಿಯೆಯಲ್ಲೂ ಬಹಳಷ್ಟು ಬದಲಾವಣೆ ಆಗಬೇಕಿದೆ. ನೇಮಕಾತಿಯಲ್ಲಿ ಸ್ಥಳೀಯ ಭಾಷೆ ಮಾತನಾಡುವವರಿಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು ಮತ್ತು ಸ್ಥಳೀಯ ಭಾಷೆ ಮಾತನಾಡಲು ಹೆಚ್ಚು ಒತ್ತು ನೀಡಬೇಕು’ ಎಂದಿದ್ದಾರೆ.

‘ನೇಮಕಾತಿ ಪ್ರಕ್ರಿಯೆ ಹೇಗಿರಬೇಕೆಂದರೆ, ಯಾವುದೇ ಶಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಅಲ್ಲಿನ ಗ್ರಾಹಕರನ್ನು ಅರ್ಥ ಮಾಡಿಕೊಳ್ಳಬೇಕು. ಅವರ ಭಾಷೆಯಲ್ಲಿ ಮಾತನಾಡಬೇಕು. ಮೇಲಧಿಕಾರಿಗಳಿಗೆ ಸ್ಥಳೀಯ ಭಾಷೆ ತಿಳಿದಿಲ್ಲವಾದರೂ, ಶಾಖೆಯ ಮಟ್ಟದ ಅಧಿಕಾರಿಗಳು ಸಂವಹನ ನಡೆಸುವಷ್ಟು ಸಾಮರ್ಥ್ಯ ಇರಬೇಕು’ ಎಂದಿದ್ದಾರೆ.

‘ಸ್ಥಳೀಯ ಭಾಷೆಯಲ್ಲಿ ಸಿಬ್ಬಂದಿಯ ದಕ್ಷತೆಯ ಆಧಾರದಲ್ಲಿ ಅವರ ಮೌಲ್ಯಮಾಪನ ಮಾಡುವುದನ್ನು ನಾನು ಬಲವಾಗಿ ಬೆಂಬಲಿಸುತ್ತೇನೆ. ಬೇರೆ ಬೇರೆ ಮಾತೃಭಾಷೆಯ ಸಿಬ್ಬಂದಿಯನ್ನು ಅನ್ಯ ಪ್ರದೇಶಗಳಿಗೆ ವರ್ಗಾವಣೆ ಮಾಡುವ ಬ್ಯಾಂಕ್‌ಗಳ ನೀತಿಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದಿದ್ದಾರೆ.

‘ಸ್ಥಳೀಯ ಭಾಷೆ ಬಲ್ಲ ಸಿಬ್ಬಂದಿಯಿಂದ ಗ್ರಾಹಕರೊಂದಿಗೆ ಸಂವಹನ ಮತ್ತು ಸಂಬಂಧ ಉತ್ತಮವಾಗಿರುತ್ತದೆ. ಇದರಿಂದ ವ್ಯವಹಾರವೂ ಉತ್ತಮವಾಗಿರುತ್ತದೆ. ಬ್ಯಾಂಕುಗಳು ಹೆಚ್ಚು ಸಾಲ ನೀಡಲು ಸಾಧ್ಯವಾಗಲಿದೆ. ಆಪ್ತ ವಾತಾವರಣ ಸೃಷ್ಟಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಉತ್ತಮ ಮಾರ್ಗ’ ಎಂದೂ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ.

ಕೃತಕ ಬುದ್ಧಿಮತ್ತೆ ಆಧಾರಿತ ‘ಸ್ಪಾರ್ಕ್‌’: ಎಸ್‌ಬಿಐ

ಸಚಿವೆ ನಿರ್ಮಲಾ ಅವರ ಆಗ್ರಹಕ್ಕೆ ಪ್ರತಿಕ್ರಿಯಿಸಿರುವ ಎಸ್‌ಬಿಐ ಅಧ್ಯಕ್ಷ ಸಿ.ಎಸ್. ಸೆಟ್ಟಿ, ‘ತನ್ನ ಗ್ರಾಹಕರೊಂದಿಗೆ ಸ್ಥಳೀಯ ಭಾಷೆಯಲ್ಲೇ ಉತ್ತಮ ಸಂಪರ್ಕ ಹೊಂದಲು ಸೂಕ್ತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವತ್ತ ಬ್ಯಾಂಕ್‌ ಯೋಜನೆ ರೂಪಿಸಿದೆ. ಇದಕ್ಕೆ ಕೃತಕ ಬುದ್ಧಿಮತ್ತೆ (ಎಐ) ಸಾಧನ ನೆರವಾಗಬಲ್ಲದು. ಇದರಿಂದ ಭಾಷೆ ಕಲಿಕೆಗೆ ತ್ವರಿತ ಪರಿಹಾರ ಮತ್ತು ಉತ್ತಮ ಸೇತುವೆಯಾಗಿಯೂ ನೆರವಾಗಲಿದೆ’ ಎಂದಿದ್ದಾರೆ.

‘ಈ ನಿಟ್ಟಿನಲ್ಲಿ ‘ಸ್ಪಾರ್ಕ್‌’ ಎಂಬ ಕಾರ್ಯಕ್ರಮವನ್ನು ಈಗಾಗಲೇ ಆರಂಭಿಸಲಾಗಿದೆ. ಭಾಷೆ ಸಂಬಂಧಿತ ಸಮಸ್ಯೆ ಸಹಿತ ಹಲವು ಸವಾಲುಗಳಿಗೆ ಇದು ಪರಿಹಾರವಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.