ADVERTISEMENT

ಆರ್ಥಿಕ ಕುಸಿತ: ಅರ್ಧಕ್ಕಿಳಿದ ವಾಹನ ಮಾರಾಟ

ಸತತ ನಾಲ್ಕನೇ ತಿಂಗಳೂ ಮುಂದುವರಿದ ಕುಸಿತ * ವಾಣಿಜ್ಯ ವಾಹನ ಕ್ಷೇತ್ರಕ್ಕೆ ಭಾರಿ ಹೊಡೆತ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 8:42 IST
Last Updated 3 ಸೆಪ್ಟೆಂಬರ್ 2019, 8:42 IST
   

ಬೆಂಗಳೂರು: ಎಲ್ಲ ರೀತಿಯ ವಾಹನ ಮಾರಾಟವು ಆಗಸ್ಟ್‌ ತಿಂಗಳಲ್ಲಿ ಭಾರಿ ಕುಸಿತ ಕಂಡಿದ್ದು, ಈಗಾಗಲೇ ತತ್ತರಿಸಿರುವ ಆರ್ಥಿಕತೆ ಇನ್ನಷ್ಟು ಕಂಗೆಡುವಂತೆ ಮಾಡಿದೆ. ಇದರೊಂದಿಗೆ ವಾಹನ ಮಾರಾಟದಲ್ಲಿನ ಇಳಿಕೆ ಪ‍್ರವೃತ್ತಿಯು ಸತತ ನಾಲ್ಕನೇ ತಿಂಗಳೂ ಮುಂದುವರಿದಂತಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿರುವ ವಾಹನ ತಯಾರಿಕೆ ಕಂಪನಿಗಳು ಆಗಸ್ಟ್‌ ತಿಂಗಳ ತಮ್ಮ ಮಾರಾಟ ವರದಿಯನ್ನು ಭಾನುವಾರ ಬಿಡುಗಡೆ ಮಾಡಿವೆ. ಬಹುತೇಕ ಎಲ್ಲಾ ಕಂಪನಿಗಳ ವಾಹನ ಮಾರಾಟದಲ್ಲಿ ಭಾರಿ ಪ್ರಮಾಣದ ಕುಸಿತ ಕಂಡಿದೆ.

2018ರ ಆಗಸ್ಟ್‌ಗೆ ಹೋಲಿಸಿದರೆ 2019ರ ಆಗಸ್ಟ್‌ನಲ್ಲಿ ಪ್ರಯಾಣಿಕರ ವಾಹನ, ಸರಕು ಸಾಗಣೆ ವಾಹನ ಮತ್ತು ಕಾರುಗಳ ಮಾರಾಟದಲ್ಲಿ ಶೇ 30ರಿಂದ ಶೇ 50ರಷ್ಟು ಇಳಿಕೆಯಾಗಿದೆ.

ADVERTISEMENT

ವಾಣಿಜ್ಯ ವಾಹನಗಳ ಮಾರಾಟಕ್ಕೆ ಹೊಡೆತ:ಟಾಟಾ ಮೋಟರ್ಸ್‌ನಬಸ್‌, ಟ್ರಕ್ ಮತ್ತು ಸಣ್ಣ ಸರಕು ಸಾಗಣೆ ವಾಹನಗಳ ಮಾರಾಟದಲ್ಲಿ ಭಾರಿ ಇಳಿಕೆಯಾಗಿದೆ. ಕಂಪನಿಯ ಭಾರಿ ಮತ್ತು ಮಧ್ಯಮ ಸರಕು ಸಾಗಣೆ ವಾಹನಗಳ ಮಾರಾಟದಲ್ಲಿ ಶೇ 58ರಷ್ಟು ಅಗಾಧ ಇಳಿಕೆ ದಾಖಲಾಗಿದೆ.

‘ಆರ್ಥಿಕ ಬಿಕ್ಕಟ್ಟಿನ ಕಾರಣ ಎಲ್ಲಾ ಕ್ಷೇತ್ರಗಳಲ್ಲೂ ವಹಿವಾಟು ಕುಂಠಿತವಾಗಿದೆ. ಹೀಗಾಗಿ ಸರಕು ಸಾಗಣೆ ಸೇವೆಗೂ ಬೇಡಿಕೆ ಕುಸಿದಿದೆ. ಸರಕು ಸಾಗಣೆಯ ವೆಚ್ಚವೂ ಏರಿಕೆಯಾಗಿದ್ದು, ಈ ಉದ್ಯಮದಲ್ಲಿ ಲಾಭದ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಸರಕು ಸಾಗಣೆ ವಾಹನಗಳ ಮಾರಾಟ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ’ ಎಂದು ಟಾಟಾ ಮೋರ್ಟಸ್‌ನ ವಾಣಿಜ್ಯ ವಾಹನ
ಗಳ ವಿಭಾಗದಮುಖ್ಯಸ್ಥ ಗಿರೀಶ್ ವಾಘ್ ವಿಶ್ಲೇಷಿಸಿದ್ದಾರೆ.

ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯ ವಾಣಿಜ್ಯ ವಾಹನಗಳ ಮಾರಾಟವು ಶೇ 28ರಷ್ಟು ಕುಸಿತ ಕಂಡಿದೆ. ವೋಲ್ವೊ ಗ್ರೂಪ್ ಆ್ಯಂಡ್ ಐಶರ್ ಮೋಟರ್ಸ್‌ನ ವಾಣಿಜ್ಯ ವಾಹನಗಳ ಮಾರಾಟ ಶೇ 41.7ರಷ್ಟು ಕುಸಿತವಾಗಿದೆ.

ಮತ್ತಷ್ಟು ಕುಸಿದ ಕಾರುಗಳ ಮಾರಾಟ:ದೇಶದ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಕಂಪನಿಗಳ ಪ್ರವೇಶ ಮಟ್ಟದ ಮತ್ತು ಮಧ್ಯಮ ಮಟ್ಟದ ಕಾರುಗಳ ಮಾರಾಟ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ.‘ಆರ್ಥಿಕ ಹಿಂಜರಿತದ ಕಾರಣ ಮಧ್ಯಮ ವರ್ಗಕ್ಕೆ ಭಾರಿ ಹೊಡೆತ ಬಿದ್ದಿದೆ. ಹೀಗಾಗಿ ಮಧ್ಯಮ ವರ್ಗವು ಖರೀದಿಸುತ್ತಿದ್ದ ಸಣ್ಣ ಕಾರುಗಳ ಮಾರಾಟ ಭಾರಿ ಕುಸಿತ ಕಂಡಿದೆ’ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಚಿಲ್ಲರೆ ಮಾರಾಟಕ್ಕೆ ಆದ್ಯತೆ ನೀಡಲಾಗುತ್ತಿದೆ. ತಯಾರಿಕೆಯಲ್ಲಿಯೂ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆ. ಉತ್ತೇಜಕ ಕ್ರಮಗಳಿಂದ ಸಕಾರಾತ್ಮಕ ಪರಿಣಾಮದ ನಿರೀಕ್ಷೆಯಲ್ಲಿದ್ದೇವೆ

– ಮಯಂಕ್ ಪರೀಕ್, ಟಾಟಾ ಮೋಟರ್ಸ್‌ ಪ್ರಯಾಣಿಕರ ವಾಹನಗಳ ವಿಭಾಗದ ಅಧ್ಯಕ್ಷ

ವಾಹನಗಳ ಖರೀದಿಗೆ ಅನುಕೂಲವಾಗುವಂತೆ ದೀರ್ಘಾವಧಿ ಸಾಲ ಒದಗಿಸಲು ಬ್ಯಾಂಕ್‌ಗಳನ್ನು ಕೋರಲಾಗಿತ್ತು. ಐಸಿಐಸಿಐ ಬ್ಯಾಂಕ್ ಸಕಾರಾತ್ಮಕವಾಗಿ ಸ್ಪಂದಿಸಿದೆ

– ವಾಹನ ಮಾರಾಟಗಾರರ ಸಂಘಟನೆಗಳ ಒಕ್ಕೂಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.