ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್ ಅಂತ್ಯದವರೆಗೆ ಭಾರತವು ₹255 ಕೋಟಿ ಮೌಲ್ಯದ ಸಿರಿಧಾನ್ಯಗಳನ್ನು ರಫ್ತು ಮಾಡಿದೆ. ಕಳೆದ ಮೂರು ವರ್ಷದಿಂದಲೂ ರಫ್ತು ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರವು, ಸಂಸತ್‌ಗೆ ತಿಳಿಸಿದೆ.
ಸಿರಿಧಾನ್ಯಗಳ ರಫ್ತು ಹೆಚ್ಚಳಕ್ಕೆ ಸರ್ಕಾರವು ಅಗತ್ಯ ಕ್ರಮಕೈಗೊಂಡಿದೆ ಎಂದು ಕೇಂದ್ರ ಆಹಾರ ಸಂಸ್ಕರಣಾ ಉದ್ಯಮಗಳ ಖಾತೆಯ ರಾಜ್ಯ ಸಚಿವ ರವನೀತ್ ಸಿಂಗ್ ಅವರು, ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
2020–21ರಲ್ಲಿ ₹224 ಕೋಟಿ, 2021–22ರಲ್ಲಿ ₹245 ಕೋಟಿ ಹಾಗೂ 2022–23ರಲ್ಲಿ ₹342 ಕೋಟಿ ಮೌಲ್ಯದ ಸಿರಿಧಾನ್ಯ ರಫ್ತು ಮಾಡಲಾಗಿದೆ. 2023–24ರಲ್ಲಿ 351 ಕೋಟಿ ಮೌಲ್ಯದ ಸಿರಿಧಾನ್ಯ ರಫ್ತಾಗಿದೆ ಎಂದು ವಿವರಿಸಿದ್ದಾರೆ.
ದೇಶದಲ್ಲಿ ಇವುಗಳ ಬಳಕೆಗೆ ಸಂಬಂಧಿಸಿದಂತೆ ಗ್ರಾಹಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ದೇಶೀಯ ಹಾಗೂ ಜಾಗತಿಕ ಮಟ್ಟದಲ್ಲಿ ಸಿರಿಧಾನ್ಯ ಆಧರಿತ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.