ADVERTISEMENT

ದೇಶದ ಆಹಾರ ಸಂಸ್ಕರಣಾ ವಲಯದಲ್ಲಿ ₹1 ಲಕ್ಷ ಕೋಟಿ ಹೂಡಿಕೆ ನಿರೀಕ್ಷೆ: ಪಾಸ್ವಾನ್

ಪಿಟಿಐ
Published 25 ಸೆಪ್ಟೆಂಬರ್ 2025, 15:47 IST
Last Updated 25 ಸೆಪ್ಟೆಂಬರ್ 2025, 15:47 IST
ಚಿರಾಗ್ ಪಾಸ್ವಾನ್
ಚಿರಾಗ್ ಪಾಸ್ವಾನ್   

ನವದೆಹಲಿ: ದೇಶದ ಆಹಾರ ಸಂಸ್ಕರಣಾ ವಲಯವು ₹1 ಲಕ್ಷ ಕೋಟಿಗೂ ಹೆಚ್ಚಿನ ಹೂಡಿಕೆ ಪ್ರಸ್ತಾವಗಳನ್ನು ಆಕರ್ಷಿಸುವ ನಿರೀಕ್ಷೆ ಇದೆ ಎಂದು ಕೇಂದ್ರ ಆಹಾರ ಸಂಸ್ಕರಣಾ ಸಚಿವ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

ಗುರುವಾರದಿಂದ ಆರಂಭವಾದ ವಿಶ್ವ ಆಹಾರ ಭಾರತ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ರಿಲಯನ್ಸ್‌ ಕನ್ಸ್ಯೂಮರ್ ಪ್ರಾಡಕ್ಟ್ಸ್‌ ಲಿಮಿಟೆಡ್‌ (ಆರ್‌ಸಿಪಿಎಲ್‌) ಮತ್ತು ಕೋಕ–ಕೋಲಾ ಘಟಕಗಳನ್ನು ಸ್ಥಾಪಿಸಲು ಅಂದಾಜು ₹65 ಸಾವಿರ ಕೋಟಿ ಹೂಡಿಕೆ ಮಾಡಲು ಸಹಿ ಹಾಕಿವೆ ಎಂದು ಗುರುವಾರ ಹೇಳಿದ್ದಾರೆ. ವಿಶ್ವ ಆಹಾರ ಭಾರತ ಶೃಂಗಸಭೆ ಸೆಪ್ಟೆಂಬರ್‌ 28ರ ವರೆಗೆ ನಡೆಯಲಿದೆ.

ದೇಶದಾದ್ಯಂತ ಆಹಾರ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಆಹಾರ ಸಂಸ್ಕರಣಾ ಸಚಿವಾಲಯದ ಜೊತೆಗೆ ರಿಲಯನ್ಸ್‌ ಕನ್ಸ್ಯೂಮರ್ ಪ್ರಾಡಕ್ಟ್ಸ್‌ಲಿಮಿಟೆಡ್‌ (ಆರ್‌ಸಿಪಿಎಲ್‌) ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಮೌಲ್ಯ ₹40 ಸಾವಿರ ಕೋಟಿಯಾಗಿದೆ. 

ADVERTISEMENT

ಒಪ್ಪಂದದ ಪ್ರಕಾರ, ಆಹಾರ ಉತ್ಪನ್ನಗಳು ಮತ್ತು ಪಾನೀಯಗಳನ್ನು ತಯಾರಿಸಲು ಮಹಾರಾಷ್ಟ್ರದ ನಾಗ್ಪುರ ಮತ್ತು ಆಂಧ್ರ ಪ್ರದೇಶ ಕರ್ನೂಲು ಜಿಲ್ಲೆಯಲ್ಲಿ ಘಟಕ ಸ್ಥಾಪಿಸಲಿದೆ. ಇದಕ್ಕೆ ಆರ್‌ಸಿಪಿಎಲ್‌ ₹1,500 ಕೋಟಿಗೂ ಹೆಚ್ಚು ಹೂಡಿಕೆ ಮಾಡಲಿದೆ. 

ಕೋಕಾ–ಕೋಲಾ ₹25,760 ಕೋಟಿ ಹೂಡಿಕೆ ಮಾಡಲಿದೆ. ಇದರಿಂದ 30 ಸಾವಿರ ನೇರ ಉದ್ಯೋಗ ಮತ್ತು 3 ಲಕ್ಷ ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಈ ಯೋಜನೆಯ ಅನುಷ್ಠಾನವು ಈ ವರ್ಷ ಪ್ರಾರಂಭವಾಗಲಿದ್ದು, 2030ರ ವೇಳೆಗೆ ಪೂರ್ಣಗೊಳ್ಳುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಆಹಾರ ಸಂಸ್ಕರಣಾ ವಲಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ವಲಯದ ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆಗೆ ಸಚಿವರು ಚರ್ಚೆ ನಡೆಸಿದರು. ಕೇಂದ್ರ ಸಚಿವ ನಿತಿನ್ ಗಡ್ಕರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.