ಪೀಯೂಷ್ ಗೋಯಲ್ –ಪಿಟಿಐ ಚಿತ್ರ
ನವದೆಹಲಿ: ದೇಶದ ಹಣಕಾಸು ಮತ್ತು ಬ್ಯಾಂಕಿಂಗ್ ವಲಯಗಳಲ್ಲಿ ₹50 ಸಾವಿರ ಕೋಟಿಗೂ ಹೆಚ್ಚು ಹೂಡಿಕೆ ಮಾಡುವ ಯೋಜನೆಯನ್ನು ವಿದೇಶಿ ಹೂಡಿಕೆದಾರರು ಕಳೆದ ಕೆಲವು ತಿಂಗಳುಗಳಲ್ಲಿ ಪ್ರಕಟಿಸಿದ್ದಾರೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ ಹಲವು ಸವಾಲುಗಳು ಎದುರಾಗುತ್ತಿದ್ದರೂ ಭಾರತವು ಹೂಡಿಕೆಯ ಓಯಸಿಸ್‌ನಂತೆ ಕಾಣುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಇಂದು ಭಾರತವು ಆದ್ಯತೆಯ ಹೂಡಿಕೆ ತಾಣವಾಗಿ ಮುಂದೆಬರುತ್ತಿದೆ ಎಂದು ಹೇಳಿದ್ದಾರೆ.
ಅಸ್ಥಿರತೆಯ ಕಾಲಘಟ್ಟದಲ್ಲಿಯೂ ವಿದೇಶಿ ನೇರ ಬಂಡವಾಳ ಹೂಡಿಕೆಯ (ಎಫ್‌ಡಿಐ) ಹರಿವು ಚೆನ್ನಾಗಿಯೇ ಇದೆ ಎಂದು ಸಚಿವರು ಎಕ್ಸ್ ಮೂಲಕ ತಿಳಿಸಿದ್ದಾರೆ. ಎಫ್‌ಡಿಐನಲ್ಲಿ ಆಗಿರುವ ಹೆಚ್ಚಳವು ದೇಶದ ಅರ್ಥ ವ್ಯವಸ್ಥೆಯು ವಿದೇಶಿ ಹೂಡಿಕೆದಾರರಿಗೆ ಹೆಚ್ಚೆಚ್ಚು ಆಕರ್ಷಕವಾಗಿ ಕಾಣುತ್ತಿದೆ ಎಂಬುದನ್ನು ಹೇಳುತ್ತಿದೆ ಎಂದು ಕೂಡ ಅವರು ಅಭಿಪ್ರಾಯಪಟ್ಟಿದ್ದಾರೆ.
ಏಪ್ರಿಲ್–ಜೂನ್ ಅವಧಿಯಲ್ಲಿ ದೇಶದಲ್ಲಿ ಎಫ್‌ಡಿಐ ಪ್ರಮಾಣವು ಶೇ 15ರಷ್ಟು ಹೆಚ್ಚಾಗಿ 18.62 ಬಿಲಿಯನ್ ಡಾಲರ್‌ಗೆ (ಅಂದಾಜು ₹1.63 ಲಕ್ಷ ಕೋಟಿ) ತಲುಪಿದೆ. ಇದೇ ಅವಧಿಯಲ್ಲಿ ಅಮೆರಿಕದಿಂದ ಆಗಿರುವ ಎಫ್‌ಡಿಐ ಮೊತ್ತವು ಮೂರು ಪಟ್ಟು ಹೆಚ್ಚಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.