ADVERTISEMENT

ಭಾರತದ ಬಗ್ಗೆ ವಿದೇಶಿ ಹೂಡಿಕೆದಾರರಲ್ಲಿ ಆಶಾವಾದ - ಯುಬಿಎಸ್ ಸೆಕ್ಯುರಿಟೀಸ್‌ ವರದಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2023, 15:58 IST
Last Updated 15 ಜೂನ್ 2023, 15:58 IST

ಮುಂಬೈ : ಅಮೆರಿಕ ಹಾಗೂ ಯುರೋಪಿನ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಭಾರತದ ವಿಚಾರವಾಗಿ ಆಶಾವಾದ ಹೊಂದಿದ್ದಾರೆ ಎಂದು ಸ್ವಿಜರ್ಲೆಂಡ್‌ನ ಬ್ರೋಕರೇಜ್ ಸಂಸ್ಥೆ ಯುಬಿಎಸ್ ಸೆಕ್ಯುರಿಟೀಸ್‌ ವರದಿ ಹೇಳಿದೆ. ಅವರು ಹೊಂದಿರುವ ಆಶಾವಾದವು ದೇಶದ ಷೇರು ಮಾರುಕಟ್ಟೆಗಳಿಗೆ ಈ ವರ್ಷದ ಮಾರ್ಚ್‌ ನಂತರದಲ್ಲಿ ಹರಿದು ಬಂದಿರುವ ಹೂಡಿಕೆ ಮೊತ್ತದಿಂದಲೇ ಗೊತ್ತಾಗುತ್ತಿದೆ ಎಂದು ಅದು ಹೇಳಿದೆ.

ಅಮೆರಿಕ ಹಾಗೂ ಯುರೋಪಿನ ಐವತ್ತಕ್ಕೂ ಹೆಚ್ಚಿನ ಬಂಡವಾಳ ಹೂಡಿಕೆದಾರರ (ಎಫ್‌ಪಿಐ) ಜೊತೆ ಮಾತುಕತೆ ನಡೆಸಿ, ಈ ವರದಿ ಸಿದ್ಧಪಡಿಸಲಾಗಿದೆ. ಮಾರ್ಚ್‌ ನಂತರದಲ್ಲಿ ಎಫ್‌ಪಿಐ ಹೂಡಿಕೆದಾರರು ಭಾರತದ ಷೇರು ಮಾರುಕಟ್ಟೆಗಳಲ್ಲಿ ತೊಡಗಿಸಿರುವ ಮೊತ್ತವು 9.5 ಬಿಲಿಯನ್ ಡಾಲರ್ (₹77 ಸಾವಿರ ಕೋಟಿ) ದಾಟಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಜಯ ಸಾಧಿಸಬಹುದು ಎಂಬ ನಿರೀಕ್ಷೆಯನ್ನು ಜಾಗತಿಕ ಹೂಡಿಕೆದಾರರು ಹೊಂದಿದ್ದಾರೆ.

ADVERTISEMENT

ದೇಶದ ಬಗ್ಗೆ ಹಾಗೂ ಇಲ್ಲಿನ ಷೇರು ಮಾರುಕಟ್ಟೆಯ ಬಗ್ಗೆ ಯುಬಿಎಸ್ ಸೆಕ್ಯುರಿಟೀಸ್‌ ಎಚ್ಚರಿಕೆಯ ಮಾತುಗಳನ್ನೂ ಹೇಳಿದೆ. ಬ್ಯಾಂಕ್‌ ಬಡ್ಡಿ ದರ ಹೆಚ್ಚುತ್ತಿರುವ ಕಾರಣ ಜನರು ತಮ್ಮ ಹಣವನ್ನು ಈಕ್ವಿಟಿಗಳ ಬದಲು ಬೇರೆ ಕಡೆ ತೊಡಗಿಸಬಹುದು ಎಂದು ಅದು ಹೇಳಿದೆ. ಹೀಗಾಗಿ, ಈ ವರ್ಷದಲ್ಲಿ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ, 18 ಸಾವಿರ ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಬಹುದು ಎಂದು ಅದು ಅಂದಾಜು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.