ADVERTISEMENT

ಪರಿಷ್ಕೃತ ಜಿಡಿಪಿ ದರ: ಪರಿಣತರ ಪರಾಮರ್ಶೆಗೆ ಅರವಿಂದ್‌ ಸಲಹೆ

ಪಿಟಿಐ
Published 9 ಡಿಸೆಂಬರ್ 2018, 20:00 IST
Last Updated 9 ಡಿಸೆಂಬರ್ 2018, 20:00 IST
ಅರವಿಂದ ಸುಬ್ರಮಣಿಯನ್‌
ಅರವಿಂದ ಸುಬ್ರಮಣಿಯನ್‌   

ನವದೆಹಲಿ: ಯುಪಿಎ ಸರ್ಕಾರದ ಅಧಿಕಾರಾವಧಿಯಲ್ಲಿನ ಆರ್ಥಿಕ ವೃದ್ಧಿ ದರ (ಜಿಡಿಪಿ) ಪರಿಷ್ಕರಣೆಯನ್ನು ಪರಿಣತರಿಂದ ಪರಿಶೀಲನೆಗೆ ಒಳಪಡಿಸಬೇಕು ಎಂದು ಕೇಂದ್ರ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್‌ ಸುಬ್ರಮಣಿಯನ್‌ ಸಲಹೆ ನೀಡಿದ್ದಾರೆ.

‘ಪರಿಷ್ಕೃತ ‘ಜಿಡಿಪಿ’ ಬಗೆಗಿನ ಒಗಟು ಬಿಡಿಸಿ ಸಂದೇಹ ದೂರ ಮಾಡಲು ಈ ಕ್ರಮ ಅನುಸರಿಸುವುದು ಅಗತ್ಯ. ಜಿಡಿಪಿ ದತ್ತಾಂಶ ಲೆಕ್ಕ ಹಾಕುವ ತಾಂತ್ರಿಕ ಪರಿಣತಿ ಇಲ್ಲದ ಸಂಸ್ಥೆಗಳು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಾರದು’ ಎಂದು ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ತಮ್ಮ ಹೊಸ ಪುಸ್ತಕ ’ಆಫ್ ಕೌನ್ಸೆಲ್‌; ದಿ ಚಾಲೆಂಜಿಸ್‌ ಆಫ್‌ ಮೋದಿ – ಜೇಟ್ಲಿ ಇಕಾನಮಿ’ಯಲ್ಲಿ ಅರವಿಂದ್‌ ಅವರು, ಎರಡು ವರ್ಷಗಳ ಹಿಂದಿನ ಗರಿಷ್ಠ ಮುಖ ಬೆಲೆ ನೋಟು ರದ್ದತಿ ನಿರ್ಧಾರವನ್ನು ಟೀಕಿಸಿದ್ದಾರೆ.

ADVERTISEMENT

ನೋಟು ರದ್ದತಿ ನಿರ್ಧಾರ ಕೈಗೊಳ್ಳುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ನಿಮ್ಮ ಸಲಹೆ ಕೇಳಿದ್ದರೆ ಎನ್ನುವ ಪ್ರಶ್ನೆಗೆ ಅವರು ನೇರ ಉತ್ತರ ನೀಡದೆ ಜಾರಿಕೊಂಡಿದ್ದಾರೆ.

‘ಇದು, ಸರ್ಕಾರ ಮತ್ತು ಮುಖ್ಯ ಆರ್ಥಿಕ ಸಲಹೆಗಾರನ ಮಧ್ಯೆ ನಡೆದ ಮಾತುಕತೆಗೆ ಸಂಬಂಧಿಸಿದ ಗುಟ್ಟುಗಳನ್ನು ರಟ್ಟು ಮಾಡುವ ರೋಚಕ ಸಂಗತಿ ಅಲ್ಲ ಎನ್ನುವುದನ್ನು ನಾನು ನನ್ನ ಪುಸ್ತಕದಲ್ಲಿ ಹೇಳಿರುವೆ. ಅದೆಲ್ಲ ಗಾಳಿಸುದ್ದಿಗಳನ್ನು ಬರೆಯುವ ಅಂಕಣಕಾರರಿಗೆ ಸೇರಿದ ವಿಷಯವಾಗಿದೆ.

ಪರಿಣತರ ತಪಾಸಣೆ: ‘ಆರ್ಥಿಕತಜ್ಞನ ನೆಲೆಯಲ್ಲಿ, ಪರಿಷ್ಕೃತ ಜಿಡಿಪಿ ಬಗ್ಗೆ ಕೆಲ ಒಗಟುಗಳಿವೆ ಎಂಬುದು ನನ್ನ ನಿಲುವಾಗಿದೆ. ಕೆಲ ವಿಷಯಗಳಿಗೆ ವಿವರಣೆ ನೀಡಬೇಕಾಗಿದೆ. ಅನೇಕ ಸಂಗತಿಗಳನ್ನು ವಿಶ್ಲೇಷಿಸಬೇಕಾಗಿರುವಾಗ ಯಾವುದೇ ಬಗೆಯ ಅನಿಶ್ಚಿತತೆ ಅಥವಾ ಅನುಮಾನಗಳನ್ನು ನಿವಾರಿಸಬೇಕಾಗಿದೆ. ಇದನ್ನು ಪರಿಣತರು ಸಮಗ್ರವಾಗಿ ತಪಾಸಣೆಗೆ ಒಳಪಡಿಸಿ ತಮ್ಮ ನಿರ್ಧಾರ ತಿಳಿಸಬೇಕಾಗಿದೆ.

ಹಿಂದಿನ ತಿಂಗಳು ಪರಿಷ್ಕೃತ ಜಿಡಿಪಿ ವಿವರಗಳನ್ನು ಬಿಡುಗಡೆ ಮಾಡುವ ಸುದ್ದಿಗೋಷ್ಠಿಯಲ್ಲಿ ನೀತಿ ಆಯೋಗವು ಭಾಗವಹಿಸಿದ್ದಕ್ಕೆ ಸಂಬಂಧಿಸಿದ ಪ್ರಶ್ನೆಗ ಉತ್ತರಿಸಿರುವ ಅವರು, ‘ದತ್ತಾಂಶಗಳನ್ನು ಸಿದ್ಧಪಡಿಸುವ ಮತ್ತು ಅವುಗಳ ಬಗ್ಗೆ ವಿವರಣೆ ನೀಡುವಾಗ ಪರಿಣತರಷ್ಟೇ ಅದನ್ನು ನಿರ್ವಹಿಸಬೇಕು’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಜಿಡಿಪಿ ಲೆಕ್ಕ ಹಾಕುವುದು ತಾಂತ್ರಿಕ ಪರಿಣತಿ ಹೊಂದಿದವರ ಕೆಲಸವಾಗಿದೆ. ತಾಂತ್ರಿಕ ಪರಿಣತಿ ಇಲ್ಲದ ಸಂಸ್ಥೆಗಳು ಈ ಪ್ರಕ್ರಿಯೆಯಲ್ಲಿ ಭಾಗವಹಿಸಬಾರದು.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅಧಿಕಾರಾವಧಿಯಲ್ಲಿನ ಆರ್ಥಿಕ ವೃದ್ಧಿ ದರವನ್ನು 2004–05ನೆ ವರ್ಷವನ್ನು ಆಧಾರವಾಗಿ ಇಟ್ಟುಕೊಳ್ಳುವ ಬದಲಿಗೆ 2011–12ನೆ ವರ್ಷವನ್ನು ಆಧರಿಸಿ ಲೆಕ್ಕ ಹಾಕಿದ್ದ ಕೇಂದ್ರೀಯ ಸಾಂಖ್ಯಿಕ ಕಚೇರಿಯು (ಸಿಎಸ್‌ಒ) ಜಿಡಿಪಿ ದರವನ್ನು ತಗ್ಗಿಸಿತ್ತು.

ಸರ್ಕಾರಿ ಹುದ್ದೆಯಲ್ಲಿದ್ದಾಗ ನೋಟು ರದ್ದತಿ ನಿರ್ಧಾರ ಟೀಕಿಸದ ನೀವು, ಈಗ ನಿಮ್ಮ ಪುಸ್ತಕ ಮಾರಾಟ ಮಾಡುವ ಉದ್ದೇಶದಿಂದ ಟೀಕಿಸುತ್ತಿದ್ದೀರಿ’ ಎನ್ನುವ ಟೀಕೆ ಕೇಳಿಬರುತ್ತಿದೆಯಲ್ಲ ಎನ್ನುವ ಪ್ರಶ್ನೆಗೆ, ‘ಜನರು ತಮಗೆ ಸರಿಕಂಡಂತೆ ಹೇಳುತ್ತಾರೆ’ ಎಂದು ಉತ್ತರಿಸಿದ್ದಾರೆ.

ದೊಡ್ಡ ಒಗಟು: ‘ನನ್ನ ಈ ಹೊಸ ಪುಸ್ತಕದ ಮೂಲಕ ನಾನು ನೋಟು ರದ್ದತಿಗೆ ಸಂಬಂಧಿಸಿದ ದೊಡ್ಡ ಒಗಟಿನ ಬಗ್ಗೆ ಗಮನ ಸೆಳೆಯುತ್ತಿದ್ದೇನೆ. ನೋಟು ರದ್ದತಿ ನಂತರ ನಗದು ಪ್ರಮಾಣವು ಶೇ 86ರಷ್ಟು ಕಡಿಮೆಯಾಗಿದ್ದರೂ, ಆರ್ಥಿಕತೆ ಮೇಲೆ ಕಡಿಮೆ ಪ್ರಮಾಣದ ಪರಿಣಾಮ ಉಂಟಾಗಿದೆ. ಜಿಡಿಪಿಯನ್ನು ನಾವು ಸರಿಯಾಗಿ ಲೆಕ್ಕ ಹಾಕಿರದ ಕಾರಣಕ್ಕೆ ಹೀಗೆ ಆಗಿರಬಹುದೇ ಅಥವಾ ನಮ್ಮ ಆರ್ಥಿಕತೆಯು ಪ್ರತಿಕೂಲತೆಗಳನ್ನು ಹೆಚ್ಚು ಸಮರ್ಥವಾಗಿ ನಿಭಾಯಿಸಿರುವ ಕಾರಣ ಇರಬಹುದೇ ಎನ್ನುವುದು ಇತ್ಯರ್ಥವಾಗಬೇಕಾಗಿದೆ’ ಎಂದು ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.