ADVERTISEMENT

ಪ್ರಗತಿ ಹಿಂಜರಿತದಲ್ಲಿ ಆರ್ಥಿಕತೆ

ಪ್ರಧಾನಿ ಕಚೇರಿಯಲ್ಲಿ ಅಧಿಕಾರ ಕೇಂದ್ರೀಕೃತ ಒಳ್ಳೆಯದಲ್ಲ: ರಘುರಾಂ ರಾಜನ್‌

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 19:30 IST
Last Updated 8 ಡಿಸೆಂಬರ್ 2019, 19:30 IST
ರಘುರಾಂ ರಾಜನ್‌
ರಘುರಾಂ ರಾಜನ್‌   

ನವದೆಹಲಿ (ಪಿಟಿಐ): ‘ದೇಶದ ಆರ್ಥಿಕತೆಯು ‘ಬೆಳವಣಿಗೆಯ ಹಿಂಜರಿತ’ದಲ್ಲಿ ಸಿಲುಕಿಕೊಂಡಿದ್ದು, ಗ್ರಾಮೀಣ ಪ್ರದೇಶವು ತೀವ್ರ ಸಂಕಷ್ಟದಲ್ಲಿ ಇದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾಜಿ ಗವರ್ನರ್‌ ರಘುರಾಂ ರಾಜನ್‌ ಅವರು ಹೇಳಿದ್ದಾರೆ.

‘ಅತಿಯಾದ ಅಧಿಕಾರ ಕೇಂದ್ರೀಕರಣಗೊಂಡಿರುವ ಪ್ರಧಾನಿ ಕಚೇರಿ (ಪಿಎಂಒ) ಮತ್ತು ಅಧಿಕಾರವೇ ಇಲ್ಲದ ಸಚಿವರು ಅರ್ಥ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದಾರೆ’ ಎಂದು ಅವರು ‘ಇಂಡಿಯಾ ಟುಡೆ’ ನಿಯತಕಾಲಿಕದಲ್ಲಿ ಬರೆದ ಲೇಖನದಲ್ಲಿ ವಿಶ್ಲೇಷಿಸಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿನ ಸರ್ಕಾರವು ಕುಂಠಿತ ಆರ್ಥಿಕತೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಾರ್ಯಪ್ರವೃತ್ತವಾಗುವ ಮುಂಚೆ, ಸಮಸ್ಯೆಯ ತೀವ್ರತೆಯನ್ನು ಒಪ್ಪಿಕೊಳ್ಳಬೇಕಾಗಿದೆ. ಆರ್ಥಿಕ ವಿದ್ಯಮಾನಗಳನ್ನು ಸಮರ್ಥವಾಗಿ ನಿರ್ವಹಿಸದ ಸರ್ಕಾರದ ವಿರುದ್ಧದ ಟೀಕೆಗಳನ್ನು ರಾಜಕೀಯ ಪ್ರೇರಿತ ಎಂದು ಬ್ರ್ಯಾಂಡ್‌ ಮಾಡುವುದನ್ನು ನಿಲ್ಲಿಸಬೇಕು.

ADVERTISEMENT

‘ಆರ್ಥಿಕತೆಯಲ್ಲಿ ಮಂದಗತಿಯ ಬೆಳವಣಿಗೆ ಕಂಡುಬರುತ್ತಿರುವುದನ್ನು ತಿಳಿದುಕೊಳ್ಳುವುದಕ್ಕೆ ನಾವು ಕೇಂದ್ರ ಸರ್ಕಾರದಲ್ಲಿನ ಕೇಂದ್ರೀಕೃತ ವ್ಯವಸ್ಥೆಯನ್ನು ಮೊದಲು ಅರ್ಥೈಸಿಕೊಳ್ಳಬೇಕು. ಪ್ರಧಾನಿ ಸುತ್ತ ಇರುವ ಕೆಲವೇ ಕೆಲವರಲ್ಲಿ ಅಧಿಕಾರ ಕೇಂದ್ರೀಕೃತಗೊಂಡಿದೆ. ಪ್ರಧಾನಿ ಕಚೇರಿಯಲ್ಲಿಯೇ ಎಲ್ಲ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಈ ವ್ಯವಸ್ಥೆಯು ಪಕ್ಷದ ರಾಜಕೀಯ ಮತ್ತು ಸಾಮಾಜಿಕ ಕಾರ್ಯಸೂಚಿಗೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ಆದರೆ, ಆರ್ಥಿಕ ವಿದ್ಯಮಾನಗಳಿಗೆ ಇದು ಸರಿ ಹೊಂದುವುದಿಲ್ಲ.

‘ಸಚಿವರಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಅಧಿಕಾರವೇ ಇಲ್ಲ. ಉನ್ನತ ನಾಯಕತ್ವದಿಂದ ಸುಸಂಬದ್ಧವಾದ ಮಾರ್ಗದರ್ಶನವೂ ಕಂಡುಬರುತ್ತಿಲ್ಲ. ಪ್ರಧಾನಿ ಕಚೇರಿಯು ಹೆಚ್ಚು ಒತ್ತು ನೀಡಿದಾಗಲೇ ಆರ್ಥಿಕ ಸುಧಾರಣಾ ಕ್ರಮಗಳ ಜಾರಿ ತೀವ್ರಗೊಳ್ಳುತ್ತದೆ. ‘ಪಿಎಂಒ’ ಇತರ ಸಂಗತಿಗಳತ್ತ ಗಮನ ಹರಿಸಿದಾಗ ಸುಧಾರಣೆಗೆ ಆದ್ಯತೆ ಸಿಗದೆ ಹೋಗುತ್ತದೆ.

‘ನಿರ್ಮಾಣ, ರಿಯಲ್‌ ಎಸ್ಟೇಟ್‌ ಮತ್ತು ಮೂಲಸೌಕರ್ಯ ವಲಯಗಳು ತೀವ್ರ ತೊಂದರೆಯಲ್ಲಿವೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿನ (ಎನ್‌ಬಿಎಫ್‌ಸಿ) ನಗದು ಬಿಕ್ಕಟ್ಟು ಮತ್ತು ಬ್ಯಾಂಕ್‌ಗಳಲ್ಲಿನ ವಸೂಲಾಗದ ಸಾಲದ ಪ್ರಮಾಣವು ಆರ್ಥಿಕತೆಗೆ ಸಾಲ ನೆರವನ್ನು ಕಡಿತಗೊಳಿಸಿದೆ. ನಿರುದ್ಯೋಗ ಹೆಚ್ಚುತ್ತಿದ್ದು ಯುವ ಜನರಲ್ಲಿ ಅಶಾಂತಿಗೆ ಕಾರಣವಾಗುತ್ತಿದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.