ADVERTISEMENT

ಎಫ್‌ಪಿಐ ಹೂಡಿಕೆ ಹೆಚ್ಚಳ: ಕಾರ್ಪೊರೇಟ್‌ ಗಳಿಕೆಯಲ್ಲಿ ಚೇತರಿಕೆ

ಪಿಟಿಐ
Published 29 ಡಿಸೆಂಬರ್ 2019, 23:31 IST
Last Updated 29 ಡಿಸೆಂಬರ್ 2019, 23:31 IST
   

ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಡಿಸೆಂಬರ್‌ 2 ರಿಂದ 27ರವರೆಗೆ ಬಂಡವಾಳ ಮಾರುಕಟ್ಟೆಯಲ್ಲಿ ₹ 2,613 ಕೋಟಿ ಹೂಡಿಕೆ ಮಾಡಿದ್ದಾರೆ.

ಕಾರ್ಪೊರೇಟ್‌ ಗಳಿಕೆಯಲ್ಲಿ ಚೇತರಿಕೆ, ಅಮೆರಿಕದ ಫೆಡರಲ್‌ ರಿಸರ್ವ್‌ನಿಂದ ಬಡ್ಡಿದರ ಕಡಿತ ಮತ್ತು ಕೇಂದ್ರ ಸರ್ಕಾರದಿಂದ ಬಂಡವಾಳ ಹೂಡಿಕೆಯಂತಹ ವಿದ್ಯಮಾನಗಳಿಂದಾಗಿ ಹೂಡಿಕೆ ಮಾಡುತ್ತಿದ್ದಾರೆ.

ಹೂಡಿಕೆದಾರರು ₹ 6,302 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದರೆ, ₹ 3,689 ಕೋಟಿ ಮೌಲ್ಯದ ಸಾಲಪತ್ರಗಳನ್ನು ಮಾರಾಟ ಮಾಡಿದ್ದಾರೆ. ಇದರಿಂದ ಒಟ್ಟಾರೆ ಒಳಹರಿವು ₹ 2,613 ಕೋಟಿಗಳಷ್ಟಾಗಿದೆ.

ADVERTISEMENT

ಜನವರಿ, ಜುಲೈ ಮತ್ತು ಆಗಸ್ಟ್‌ ಹೊರತುಪಡಿಸಿ, ಉಳಿದೆಲ್ಲಾ ತಿಂಗಳುಗಳಲ್ಲಿಯೂ ಹೂಡಿಕೆ ಮಾಡಿದ್ದಾರೆ. ಈ ವರ್ಷದಲ್ಲಿ ಇಲ್ಲಿಯವರೆಗೆ ಒಟ್ಟಾರೆ ₹ 73,277 ಕೋಟಿ ಹೂಡಿಕೆ ಮಾಡಿದ್ದಾರೆ.

‘ಇತ್ತೀಚಿನ ರಾಜಕೀಯ ವಿದ್ಯಮಾನಗಳು, ಅಮೆರಿಕ–ಚೀನಾ ವಾಣಿಜ್ಯ ಸಮರದಂತಹ ವಿದ್ಯಮಾನಗಳಿಂದಾಗಿ ಭವಿಷ್ಯದಲ್ಲಿ ಹೂಡಿಕೆಯ ಬಗ್ಗೆ ನಿಶ್ಚಿತವಾಗಿ ಹೇಳುವುದು ಕಷ್ಟ. ಆರ್ಥಿಕ ಚೇತರಿಕೆಗೆ ಕೇಂದ್ರ ಸರ್ಕಾರ ಹಲವು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿದೆ. ಅವುಗಳ ಪರಿಣಾಮವನ್ನು ಇನ್ನಷ್ಟೇ ನೋಡಬೇಕಿದೆ’ ಎಂದು ಮಾರ್ನಿಂಗ್‌ಸ್ಟಾರ್‌ ಕಂಪನಿಯ ಹಿರಿಯ ವಿಶ್ಲೇಷಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.