ADVERTISEMENT

FPI: ವಿದೇಶಿ ಹೂಡಿಕೆದಾರರಿಂದ 2025ರಲ್ಲಿ ₹1.55 ಲಕ್ಷ ಕೋಟಿ ವಾಪಸ್

ದೇಶದ ಬಂಡವಾಳ ಮಾರುಕಟ್ಟೆಗಳಲ್ಲಿ ಷೇರು ಮಾರಾಟಕ್ಕೆ ಗಮನ ನೀಡಿರುವ ವಿದೇಶಿ ಹೂಡಿಕೆದಾರರು

ಪಿಟಿಐ
Published 7 ಡಿಸೆಂಬರ್ 2025, 14:46 IST
Last Updated 7 ಡಿಸೆಂಬರ್ 2025, 14:46 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ನವದೆಹಲಿ: ವಿದೇಶಿ ಹೂಡಿಕೆದಾರರು ಡಿಸೆಂಬರ್‌ ತಿಂಗಳ ಮೊದಲ ಒಂದು ವಾರದಲ್ಲಿ ಭಾರತದ ಬಂಡವಾಳ ಮಾರುಕಟ್ಟೆಗಳಿಂದ ಒಟ್ಟು ₹11,820 ಕೋಟಿ ಮೊತ್ತವನ್ನು ಹಿಂಪಡೆದಿದ್ದಾರೆ. ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯವು ತೀವ್ರವಾಗಿ ಕುಸಿತ ಕಂಡಿದ್ದು ಕೂಡ ಅವರ ಈ ನಡೆಗೆ ಒಂದು ಕಾರಣ.

ವಿದೇಶಿ ಹೂಡಿಕೆದಾರರು ನವೆಂಬರ್‌ನಲ್ಲಿ ನಿವ್ವಳ ₹3,765 ಕೋಟಿ ಮೊತ್ತವನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಂಡಿದ್ದರು. ಆದರೆ ಅವರು ಅಕ್ಟೋಬರ್‌ನಲ್ಲಿ ನಿವ್ವಳ ₹14,610 ಕೋಟಿ ಮೊತ್ತವನ್ನು ಮಾರುಕಟ್ಟೆಯಲ್ಲಿ ತೊಡಗಿಸಿದ್ದರು.

ADVERTISEMENT

ಅದಕ್ಕೂ ಹಿಂದಿನ ಮೂರು ತಿಂಗಳುಗಳಲ್ಲಿ ಕೂಡ ವಿದೇಶಿ ಹೂಡಿಕೆದಾರರು ಭಾರಿ ಮೊತ್ತವನ್ನು ಹಿಂಪಡೆದಿದ್ದರು. ಸೆಪ್ಟೆಂಬರ್‌ನಲ್ಲಿ ₹23,885 ಕೋಟಿ, ಆಗಸ್ಟ್‌ನಲ್ಲಿ ₹34,990 ಕೋಟಿ ಹಾಗೂ ಜುಲೈನಲ್ಲಿ ₹17,700 ಕೋಟಿಯಷ್ಟು ಮೊತ್ತವು ಭಾರತದ ಮಾರುಕಟ್ಟೆಗಳಿಂದ ವಾಪಸ್ ಹೋಗಿತ್ತು.

ಎನ್‌ಎಸ್‌ಡಿಎಲ್‌ನಲ್ಲಿ ಲಭ್ಯವಿರುವ ದತ್ತಾಂಶದ ಪ್ರಕಾರ, ಡಿಸೆಂಬರ್‌ನಲ್ಲಿಯೂ ವಿದೇಶಿ ಹೂಡಿಕೆದಾರರು ಹಣ ಹಿಂಪಡೆಯುವುದನ್ನು ಮುಂದುವರಿಸಿದ್ದಾರೆ. ಇದರಿಂದಾಗಿ ಈ ವರ್ಷದಲ್ಲಿ ಅವರು ಭಾರತದ ಬಂಡವಾಳ ಮಾರುಕಟ್ಟೆಗಳಿಂದ ಹಿಂಪಡೆದ ಒಟ್ಟು ಮೊತ್ತವು ₹1.55 ಲಕ್ಷ ಕೋಟಿಯಷ್ಟಾಗಿದೆ.

ಭಾರತದ ಕರೆನ್ಸಿಯ ಬಗ್ಗೆ ಇರುವ ಕಳವಳವು ಅವರು ಹಣ ಹಿಂಪಡೆಯುತ್ತಿರುವುದಕ್ಕೆ ಪ್ರಮುಖ ಕಾರಣ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ‘ಈ ವರ್ಷದಲ್ಲಿ ರೂಪಾಯಿ ಮೌಲ್ಯವು ಸರಿಸುಮಾರು ಶೇ 5ರಷ್ಟು ಕುಸಿದಿದೆ. ಇಂತಹ ಸಂದರ್ಭಗಳಲ್ಲಿ ವಿದೇಶಿ ಹೂಡಿಕೆದಾರರು ಹೂಡಿಕೆಯನ್ನು ಹಿಂತೆಗೆದುಕೊಳ್ಳುವುದಿದೆ’ ಎಂದು ಜಿಯೋಜಿತ್‌ ಇನ್ವೆಸ್ಟ್‌ಮೆಂಟ್ಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.

ಜಾಗತಿಕ ಮಟ್ಟದ ಹೂಡಿಕೆದಾರರು ವರ್ಷಾಂತ್ಯದಲ್ಲಿ ತಮ್ಮ ಪೋರ್ಟ್‌ಫೋಲಿಯೊದಲ್ಲಿ ತರುವ ಬದಲಾವಣೆಯ ಕಾರಣದಿಂದಾಗಿಯೂ ಷೇರು ಮಾರಾಟ ಹೆಚ್ಚಾಗಿದೆ ಎಂದು ಏಂಜಲ್‌ ಒನ್‌ ಬ್ರೋಕಿಂಗ್‌ ಕಂಪನಿಯ ಹಿರಿಯ ವಿಶ್ಲೇಷಕ ವಕಾರ್‌ಜಾವೇದ್ ಖಾನ್ ಹೇಳಿದ್ದಾರೆ.