ADVERTISEMENT

ಇಂಧನ ಬೇಡಿಕೆ ಕುಸಿತ: ನಷ್ಟದ ಆತಂಕ

ಪಿಟಿಐ
Published 7 ಏಪ್ರಿಲ್ 2020, 20:00 IST
Last Updated 7 ಏಪ್ರಿಲ್ 2020, 20:00 IST
   

ಮುಂಬೈ: ಕೊರೊನಾ ದಿಂದಾಗಿ ದೇಶದಲ್ಲಿ ಇಂಧನ ಬೇಡಿಕೆ ಕುಸಿಯುತ್ತಿದೆ. ಇದರಿಂದಾಗಿ ತೈಲ ಮಾರಾಟ ಕಂಪನಿಗಳು ನಷ್ಟ ಅನುಭವಿ ಸುವ ಆತಂಕದಲ್ಲಿವೆ.

ಬೇಡಿಕೆ ಇಲ್ಲದೇ ಇರುವುದರಿಂದ ತೈಲ ಸಂಸ್ಕರಣೆ ಪ್ರಮಾಣಕಡಿಮೆ ಮಾಡಲಾಗಿದೆ. ಕಂಪನಿಗಳು ಸಂಗ್ರಹ ಮಾಡಿರುವ ಇಂಧನ ಮಾರಾಟವಾಗದೇ ನಷ್ಟ ಉಂಟಾಗುತ್ತಿದೆ ಎಂದು ತೈಲ ಮಾರಾಟ ಕಂಪನಿಗಳು ಹೇಳಿವೆ.

ತೈಲ ಬಳಕೆಯಲ್ಲಿ ಭಾರತವು ವಿಶ್ವದಲ್ಲಿಯೇ ಮೂರನೇ ಸ್ಥಾನದಲ್ಲಿದೆ. ಇದೀಗ ಲಾಕ್‌ಡೌನ್‌ನಿಂದಾಗಿ ವಾಣಿಜ್ಯ –ವಹಿವಾಟು, ವಿಮಾನ ಹಾರಾಟ, ರೈಲು ಸಂಚಾರ ಸ್ಥಗಿತಗೊಂಡಿವೆ. ಇದು ತೈಲ ಬೇಡಿಕೆಯನ್ನು ಭಾರಿ ಪ್ರಮಾಣದಲ್ಲಿ ಕಡಿಮೆ ಮಾಡಿದೆ.

ADVERTISEMENT

ಮಾರ್ಚ್‌ನಲ್ಲಿ ಪೆಟ್ರೋಲ್‌, ಡೀಸೆಲ್‌, ವಿಮಾನ ಇಂಧನದ ಬೇಡಿಕೆ ಕಡಿಮೆಯಾಗಿದೆ. ಅಡುಗೆ ಅನಿಲ (ಎಲ್‌ಪಿಜಿ) ಬೇಡಿಕೆಯಲ್ಲಿ ಮಾತ್ರವೇ ಶೇ 1.7ರಷ್ಟು ಏರಿಕೆ ಕಂಡುಬಂದಿದೆ. ದೇಶದಲ್ಲಿ 27.59 ಕೋಟಿ ಸಕ್ರಿಯ ಎಲ್‌ಪಿಜಿ ಬಳಕೆದಾರರಿದ್ದಾರೆ.

ದೇಶದ ಎಲ್ಲಾ ಕಂಪನಿಗಳ ಎಲ್‌ಪಿಜಿ ಬೇಡಿಕೆಯು ಲಾಕ್‌ಡೌನ್‌ ಆದ ಮೊದಲ ವಾರದಲ್ಲಿ ಶೇ 40ರಷ್ಟು ಏರಿಕೆಯಾಗಿದೆ. ಡೀಸೆಲ್‌ ಮತ್ತು ಪೆಟ್ರೋಲ್‌ ಮಾರಾಟದಲ್ಲಿ ಶೇ 55ರಷ್ಟು ಇಳಿಕೆ ಯಾಗಿದೆ ಎಂದು ಬಿಪಿಸಿಎಲ್‌ ಮತ್ತು ಎಚ್‌ಪಿಸಿಎಲ್‌ ಕಂಪನಿಗಳು ತಿಳಿಸಿವೆ.

‘ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಿನಲ್ಲಂತೂ ನಷ್ಟ ಖಚಿತ. ಲಾಕ್‌ಡೌನ್‌ ವಿಸ್ತರಿಸಿದರೆ ನಷ್ಟದಲ್ಲಿ ಏರಿಕೆಯಾಗಲಿದೆ’ ಎಂದು ಬಿಪಿಸಿಎಲ್‌ನ ಸಂಸ್ಕರಣಾಗಾರದ ನಿರ್ದೇಶಕಆರ್‌.ರಾಮಚಂದ್ರನ್‌ ತಿಳಿಸಿದ್ದಾರೆ.

ಎಂಆರ್‌ಪಿಎಲ್‌ ಉತ್ಪಾದನೆ ಕಡಿತ: ಸರ್ಕಾರಿ ಸ್ವಾಮ್ಯದ ಮಂಗಳೂರು ತೈಲಾಗಾರವು (ಎಂಆರ್‌ಪಿಎಲ್‌), ತನ್ನ ಪೆಟ್ರೋಲ್‌ ಮತ್ತು ಡೀಸೆಲ್‌ ಉತ್ಪಾದನೆಯನ್ನು ಶೇ 50ರಷ್ಟು ಕಡಿತಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.