ನವದೆಹಲಿ: ‘ಬಂದರು ನಿರ್ವಹಣೆಯಿಂದ ಇಂಧನ ಉತ್ಪಾದನೆಯವರೆಗೆ ಉದ್ಯಮಗಳನ್ನು ಮುನ್ನಡೆಸುತ್ತಿರುವ ಅದಾನಿ ಸಮೂಹವು ಈಗ ಸಂಶೋಧನೆಗೆ ವೇಗ ನೀಡಲು, ಪಾರದರ್ಶಕತೆಯನ್ನು ಹೆಚ್ಚಿಸಲು ಮುಂದಡಿ ಇರಿಸಲಿದೆ’ ಎಂದು ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಹೇಳಿದ್ದಾರೆ.
ಸಮೂಹದ ಸಿಬ್ಬಂದಿಗೆ ಪತ್ರ ಬರೆದಿರುವ ಅದಾನಿ ಅವರು, ‘2023ರ ಜನವರಿಯಲ್ಲಿ ಅಮೆರಿಕದ ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆಯು ಸಮೂಹದ ಕಂಪನಿಗಳ ಮೇಲೆ ಹಲವು ಆರೋಪಗಳನ್ನು ಹೊರಿಸಿತ್ತು. ಈ ಆರೋಪಗಳನ್ನು ಸಮೂಹವು ತಿರಸ್ಕರಿಸಿತ್ತು. ಈ ಬಗ್ಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಸಮಗ್ರ ತನಿಖೆ ನಡೆಸಿ, ಆರೋಪಗಳನ್ನು ಆಧಾರರಹಿತ ಎಂದು ಹೇಳಿದೆ’ ಎಂದು ತಿಳಿಸಿದ್ದಾರೆ.
ಪಾರದರ್ಶಕತೆ, ನಾವೀನ್ಯ, ದೀರ್ಘಕಾಲೀನ ಮೌಲ್ಯ ಸೃಷ್ಟಿ ಮತ್ತು ಪರಿವರ್ತನೆಯಂತಹ ಅಂಶಗಳ ಮೇಲೆ ಕಂಪನಿ ತನ್ನ ಗಮನವನ್ನು ಕೇಂದ್ರೀಕರಿಸಿದೆ ಎಂದು ಹೇಳಿದ್ದಾರೆ.
‘ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ನಾವು ಮಾಡುವ ಎಲ್ಲವುಗಳ ಅಡಿಪಾಯ ಆಗಿರಬೇಕು. ಈ ವಿವಾದವೊಂದು ಅಗ್ನಿಪರೀಕ್ಷೆ ಆಗಿತ್ತು. ಪ್ರತಿ ಬಿಕ್ಕಟ್ಟು ಸಂಸ್ಥೆಯನ್ನು ಸದೃಢಗೊಳಿಸುತ್ತದೆ’ ಎಂದು ಪತ್ರದಲ್ಲಿ ಹೇಳಿದ್ದಾರೆ.
ಹಿಂಡನ್‌ಬರ್ಗ್ ಆರೋಪದಿಂದ ಅದಾನಿ ಸಮೂಹದ ಮಾರುಕಟ್ಟೆ ಬಂಡವಾಳ ಮೌಲ್ಯ ₹13 ಲಕ್ಷ ಕೋಟಿಗೂ ಹೆಚ್ಚು ಕುಸಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.