ADVERTISEMENT

ಉತ್ಪ್ರೇಕ್ಷಿತ ಜಿಡಿಪಿ ವಾದ ತಪ್ಪು; ಪ್ರಧಾನಿ ಆರ್ಥಿಕ ಸಲಹಾ ಸಮಿತಿ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 19:45 IST
Last Updated 19 ಜೂನ್ 2019, 19:45 IST

ನವದೆಹಲಿ: ಆರ್ಥಿಕ ವೃದ್ಧಿ ದರದ ಅಂದಾಜನ್ನು ಉತ್ಪ್ರೇಕ್ಷಿತಗೊಳಿಸಲಾಗಿದೆ ಎನ್ನುವ ಕೇಂದ್ರ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಅವರ ವಿಶ್ಲೇಷಣೆಯನ್ನು ಪ್ರಧಾನಿ ಆರ್ಥಿಕ ಸಲಹಾ ಸಮಿತಿಯು ತಳ್ಳಿಹಾಕಿದೆ.

ಅರವಿಂದ ಅವರ ವಿಶ್ಲೇಷಣೆಯಲ್ಲಿ ಸೇವಾ ವಲಯ ಮತ್ತು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಅಂಕಿ ಅಂಶಗಳನ್ನು ನಿರ್ಲಕ್ಷಿಸಲಾಗಿದೆ. ಖಾಸಗಿ ಸಂಸ್ಥೆ ‘ಸಿಎಂಐಇ’ನಲ್ಲಿನ ಕುರುಡು ವಿಶ್ವಾಸ ಆಧರಿಸಿದೆ. ದೇಶಿ ಜಿಡಿಪಿ ಅಂದಾಜು ವಿಧಾನವು ಜಾಗತಿಕ ಗುಣಮಟ್ಟದ್ದಾಗಿದೆ ಎಂದು ಬಿಬೆಕ್‌ ಡೆಬ್ರೊಯ್‌, ರಥಿನ್ ರಾಯ್‌, ಸುರ್ಜಿತ್‌ ಭಲ್ಲಾ, ಚರಣ್‌ ಸಿಂಗ್‌ ಮತ್ತು ಅರವಿಂದ ವಿರ್ಮಾನಿ ಅವರನ್ನು ಒಳಗೊಂಡಿರುವ ಸಮಿತಿಯು ತಿಳಿಸಿದೆ.

ದೇಶದ ಸಂಕೀರ್ಣ ಆರ್ಥಿಕತೆ ಮತ್ತು ಅದರ ಪ್ರಗತಿ ಬಗ್ಗೆ ಅರವಿಂದ ಅವರು ತೀರ್ಮಾನಕ್ಕೆ ಬರಲು ಅವಸರ ಮಾಡಿದ್ದಾರೆ. ಜಿಡಿಪಿಗೆ ಸೇವಾ ವಲಯದ ಶೇ 60ರಷ್ಟು ಮತ್ತು ಕೃಷಿ ಕ್ಷೇತ್ರದ ಶೇ 18ರಷ್ಟು ಕೊಡುಗೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ.

ADVERTISEMENT

ತಮ್ಮ ವಿಶ್ಲೇಷಣೆಗೆ ಪೂರಕವಾಗಿ ಬಳಸಿಕೊಂಡಿರುವ ಮಾಹಿತಿಯನ್ನು ಖಾಸಗಿ ಸಂಸ್ಥೆ ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಇಕಾನಮಿಯಿಂದ (ಸಿಎಂಐಇ) ನೇರವಾಗಿ ಎತ್ತಿಕೊಂಡಿದ್ದಾರೆ. ಈ ಸಂಸ್ಥೆಯು ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿತ್ತು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ವೃದ್ಧಿ ದರವನ್ನು ಅತಿಯಾಗಿ ಅಂದಾಜು ಮಾಡಿರುವ ತೀರ್ಮಾನಕ್ಕೆ ಬರಲು ಖಾಸಗಿ ಸಂಸ್ಥೆಯನ್ನು ನೆಚ್ಚಿಕೊಂಡು, ಸರ್ಕಾರದ ಕೇಂದ್ರೀಯ ಸಾಂಖ್ಯಿಕ ಕಚೇರಿ (ಸಿಎಸ್‌ಒ) ನಂಬದಿರುವುದು ಅನಪೇಕ್ಷಿತ ನಿಲುವಾಗಿದೆ.

ಅರವಿಂದ ಅವರು ತೆರಿಗೆ ಅಂಕಿ ಅಂಶಗಳನ್ನೂ ನಿರ್ಲಕ್ಷಿಸಿದ್ದಾರೆ. ತೆರಿಗೆ ವಿವರಗಳು ಆರ್ಥಿಕ ವೃದ್ಧಿಯ ಮಹತ್ವದ ಸಂಕೇತಗಳಾಗಿವೆ ಎಂದೂ ಸಮಿತಿ ಅಭಿಪ್ರಾಯಪಟ್ಟಿದೆ.

ಅತಿಯಾಗಿ ಅಂದಾಜು
ದೇಶದ ಒಟ್ಟು ಆಂತರಿಕ ಉತ್ಪಾದನೆಯನ್ನು (ಜಿಡಿಪಿ) ಶೇ 2.5ರಷ್ಟು ಅತಿಯಾಗಿ ಅಂದಾಜು ಮಾಡಲಾಗಿದೆ ಎನ್ನುವುದು ಅರವಿಂದ ಅವರ ತರ್ಕವಾಗಿದೆ. 2011–12 ರಿಂದ 2016–17ರ ಅವಧಿಯಲ್ಲಿನ ಸರ್ಕಾರದ ಅಧಿಕೃತ ಅಂದಾಜು ಆಗಿರುವ ಶೇ 7ರಷ್ಟು ವೃದ್ಧಿ ದರ ಬದಲಿಗೆ ಅದು ವಾಸ್ತವದಲ್ಲಿ ಶೇ 4.5ರಷ್ಟು ಇರಬೇಕಾಗಿತ್ತು ಎಂದು ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಪ್ರಕಟಿಸಲಾಗಿರುವ ಅವರ ಸಂಶೋಧನಾ ವರದಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.