ನವದೆಹಲಿ: ಚಿನ್ನದ ಬೆಲೆಯು ಇಲ್ಲಿನ ಚಿನಿವಾರ ಪೇಟೆಯಲ್ಲಿ ಮಂಗಳವಾರದ ವಹಿವಾಟಿನಲ್ಲಿ 10 ಗ್ರಾಂಗೆ ₹5,080ರಷ್ಟು ಹೆಚ್ಚಳ ಕಂಡಿದೆ. ಈ ಮೂಲಕ ಚಿನ್ನದ ಬೆಲೆಯು ಮಂಗಳವಾರದ ಅಂತ್ಯಕ್ಕೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹1,12,750ಕ್ಕೆ ತಲುಪಿದೆ.
ಹಳದಿ ಲೋಹದ ಬೆಲೆಯು ಪ್ರತಿ 10 ಗ್ರಾಂಗಳಿಗೆ ಈ ಕ್ಯಾಲೆಂಡರ್ ವರ್ಷದಲ್ಲಿ ₹33,800ರಷ್ಟು (ಅಂದರೆ ಶೇ 43ರಷ್ಟು) ಹೆಚ್ಚಳ ಕಂಡಿದೆ. 2024ರ ಡಿಸೆಂಬರ್ 31ರಂದು ಚಿನ್ನದ ಬೆಲೆಯು 10 ಗ್ರಾಂಗೆ ₹78,950 ಆಗಿತ್ತು.
ಅಖಿಲ ಭಾರತ ಸರಾಫ್ ಒಕ್ಕೂಟ ನೀಡಿರುವ ಮಾಹಿತಿ ಪ್ರಕಾರ ಶೇಕಡ 99.9ರಷ್ಟು ಶುದ್ಧತೆಯ ಚಿನ್ನದ ದರವು ಸೋಮವಾರದ ಅಂತ್ಯಕ್ಕೆ ₹1,07,670 ಆಗಿತ್ತು.
ಕೆ.ಜಿ. ಬೆಳ್ಳಿಯ ಬೆಲೆಯು ₹2,800ರಷ್ಟು ಹೆಚ್ಚಳ ಕಂಡಿದ್ದು, ಮಂಗಳವಾರದ ಅಂತ್ಯಕ್ಕೆ ₹1,28,800 ಆಗಿದೆ. ಹಿಂದಿನ ದಿನದ ವಹಿವಾಟಿನ ಅಂತ್ಯಕ್ಕೆ ಬೆಳ್ಳಿಯ ಬೆಲೆಯು ₹1,26,000 ಆಗಿತ್ತು.
ಜಾಗತಿಕ ಮಾರುಕಟ್ಟೆ ಯಲ್ಲಿಯೂ ಚಿನ್ನದ ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.
ಅಮೆರಿಕದ ಹಣಕಾಸು ನೀತಿಯಲ್ಲಿ ತುಸು ಸಡಿಲಿಕೆ ತರುವ ಲಕ್ಷಣಗಳಿವೆ. ಹೀಗಾಗಿ ಹೂಡಿಕೆದಾರರು ಸುರಕ್ಷಿತವಾದ ಚಿನ್ನದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು
ತೊಡಗಿಸುತ್ತಿದ್ದಾರೆ. ಡಾಲರ್ ಮೌಲ್ಯವು ಇಳಿಕೆ ಕಂಡಿದ್ದುದು ಸಹ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ವರ್ತಕರು ಹೇಳಿದ್ದಾರೆ.
‘ಚಿನ್ನದ ಬೆಲೆಯು ಮಂಗಳವಾರ ಇನ್ನೊಂದು ದಾಖಲೆಯನ್ನು ಬರೆದಿದೆ. ಈ ವರ್ಷದಲ್ಲಿ ಚಿನ್ನದ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಶೇಕಡ 35ಕ್ಕಿಂತ ಜಾಸ್ತಿ ಏರಿಕೆ ಕಂಡಿದೆ. ಕೇಂದ್ರೀಯ ಬ್ಯಾಂಕ್‌ಗಳಿಂದ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಇರುವುದು, ಚಿನ್ನದ ಇಟಿಎಫ್‌ಗಳಲ್ಲಿ ಹೂಡಿಕೆ ಹೆಚ್ಚಾಗುತ್ತಿರುವುದು ಈ ಪರಿಯ ಬೆಲೆ ಏರಿಕೆಗೆ ಕಾರಣವಾಗಿವೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸರಕುಗಳ ವಿಭಾಗದ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿನ ಅನಿಶ್ಚಿತತೆಗಳು ಹಾಗೂ ಅಮೆರಿಕ ನಡೆಸಿರುವ ಸುಂಕ ಸಮರವು ಜಾಗತಿಕ ಅರ್ಥ ವ್ಯವಸ್ಥೆಯ ಮೇಲೆ ಉಂಟು ಮಾಡಬಹುದಾದ ಪರಿಣಾಮದ ಕುರಿತಾದ ಕಳವಳ ಕೂಡ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
ಬೆಳ್ಳಿ ಬೆಲೆ ₹1.5 ಲಕ್ಷಕ್ಕೆ?
ಬೆಳ್ಳಿಯ ಬೆಲೆಯು ಮುಂದಿನ ತಿಂಗಳುಗಳಲ್ಲಿ ಕೆ.ಜಿ.ಗೆ ₹1.5 ಲಕ್ಷಕ್ಕೆ ಏರಿಕೆ ಆಗಬಹುದು ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್‌ನ ವರದಿಯೊಂದು ಹೇಳಿದೆ.
ಕೈಗಾರಿಕೆಗಳಿಂದ ಹೆಚ್ಚು ಬೇಡಿಕೆ ಬರುತ್ತಿರುವುದು, ಡಾಲರ್ ದುರ್ಬಲ ಆಗುತ್ತಿರುವುದು, ಜಾಗತಿಕ ಅನಿಶ್ಚಿತತೆಗಳ ನಡುವೆ ಹೂಡಿಕೆದಾರರು ಹಣವನ್ನು ಸುರಕ್ಷಿತ ಕಡೆಗಳಲ್ಲಿ ತೊಡಗಿಸುತ್ತಿರುವುದು ಬೆಳ್ಳಿಯ ಬೆಲೆ ಏರಿಕೆಗೆ ನೆರವಾಗಬಲ್ಲವು ಎಂದು ಮೋತಿಲಾಲ್ ಓಸ್ವಾಲ್ ಹೇಳಿದೆ.
‘ಬೆಳ್ಳಿಯ ಬೆಲೆಯು ಮುಂದಿನ ಆರು ತಿಂಗಳಲ್ಲಿ ಕೆ.ಜಿ.ಗೆ ₹1.35 ಲಕ್ಷಕ್ಕೆ ತಲುಪಬಹುದು. 12 ತಿಂಗಳುಗಳಲ್ಲಿ ಬೆಲೆಯು ₹1.5 ಲಕ್ಷ ಆಗಬಹುದು ಎಂಬುದು ನಮ್ಮ ನಿರೀಕ್ಷೆ. ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 88.5ರ ಮಟ್ಟದಲ್ಲಿ ಇರುತ್ತದೆ ಎಂಬ ಅಂದಾಜಿನಲ್ಲಿ ಈ ಲೆಕ್ಕಾಚಾರ ನೀಡಲಾಗಿದೆ’ ಎಂದು ವರದಿಯು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.