ADVERTISEMENT

ಚಿನ್ನದ ದರ ಕಳೆದ ಐದು ವಹಿವಾಟುಗಳಲ್ಲಿ ₹5,000 ಇಳಿಕೆ: 10 ಗ್ರಾಂಗೆ ₹39,041

ಏಜೆನ್ಸೀಸ್
Published 17 ಮಾರ್ಚ್ 2020, 9:35 IST
Last Updated 17 ಮಾರ್ಚ್ 2020, 9:35 IST
ಚಿನ್ನದ ಆಭರಣಗಳ ಸಂಗ್ರಹ
ಚಿನ್ನದ ಆಭರಣಗಳ ಸಂಗ್ರಹ   

ನವದೆಹಲಿ: ಚಿನ್ನದ ದರ ಮಂಗಳವಾರ 10 ಗ್ರಾಂಗೆ ₹477 ಕಡಿಮೆಯಾಗಿ ₹39,041 ತಲುಪಿದೆ. ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ಏಪ್ರಿಲ್‌ನ ಚಿನ್ನದ ಫ್ಯೂಚರ್ಸ್‌ ಶೇ 1.21ರಷ್ಟು ಕಡಿಮೆಯಾಗಿದೆ.

10 ಗ್ರಾಂಗೆ ₹44,500 ಇದ್ದ ಚಿನ್ನದ ದರಕಳೆದ ಐದು ವಹಿವಾಟುಗಳಲ್ಲಿ ₹5,000 ಇಳಿಕೆಯಾಗಿದೆ. ಬೆಳ್ಳಿ ದರವೂ ಶೇ 1.7ರಷ್ಟು ಇಳಿಕೆಯಾಗಿ ಪ್ರತಿ ಕೆ.ಜಿಗೆ ₹35,593 ಮುಟ್ಟಿದೆ. ಕಳೆದ ವಹಿವಾಟುಗಳಲ್ಲಿ ಪ್ರತಿ ಕೆ.ಜಿ. ಬೆಳ್ಳಿ ಫ್ಯೂಚರ್ಸ್‌ ಶೇ 10ರಷ್ಟು (₹4,200) ಕಡಿಮೆಯಾಗಿದೆ.

ಇನ್ನೂ ಜೂನ್‌ನ ಚಿನ್ನದ ಫ್ಯೂಚರ್ಸ್‌ ಸಹ ಶೇ 1.39ರಷ್ಟು ಕುಸಿದಿದ್ದು, ₹554 ಕಡಿಮೆಯಾಗಿದೆ. ಪ್ರತಿ 10 ಗ್ರಾಂಗೆ ₹39,335 ಆಗಿದೆ. ಜಾಗತಿಕ ಮಟ್ಟದಲ್ಲಿ ಸಹ ಚಿನ್ನದ ದರ ಇಳಿಕೆಯಾಗಿದ್ದು, ಪ್ರತಿ ಔನ್ಸ್‌ (28.34 ಗ್ರಾಂ.) ಚಿನ್ನಕ್ಕೆ 1,483.60 ಡಾಲರ್‌ನಲ್ಲಿ ವಹಿವಾಟು ನಡೆದಿದೆ.

ADVERTISEMENT

ಕೋವಿಡ್‌–19 ಪ‍್ರಭಾವದಿಂದ ಜಾಗತಿಕ ಷೇರುಪೇಟೆಗಳಲ್ಲಿ ಚಂಚಲತೆ ಮುಂದುವರಿದಿರುವುದರಿಂದ ಹೂಡಿಕೆದಾರರು ಚಿನ್ನದ ಫ್ಯೂಚರ್ಸ್‌ ಹೂಡಿಕೆ ಸುರಕ್ಷಿತ ಹಾದಿ ಎಂದೇ ಭಾವಿಸಿದ್ದರು. ಪೇರುಪೇಟೆ ಇಳಿಮುಖವಾಗಿರುವುದರಿಂದ ಫ್ಯೂಚರ್ಸ್‌ ಮಾರಾಟ ಮಾಡಿ ಹಣ ಪಡೆಯಲು ಮುಂದಾಗಿದ್ದಾರೆ.

ಅಮೆರಿಕದ ಷೇರುಪೇಟೆಗಳಲ್ಲಿ ರಾತ್ರಿ ಶೇ 13ರಷ್ಟು ಕುಸಿತ ಉಂಟಾಗಿದೆ. 1987ರಿಂದ ಮೊದಲ ಬಾರಿಗೆ ಅತಿ ದೊಡ್ಡ ನಷ್ಟ ದಾಖಲಾಗಿದ್ದು, ಇದರ ಪರಿಣಾಮ ಜಾಗತಿಕ ಷೇರುಪೇಟೆಗಳ ಮೇಲೂ ಆಗಿದೆ. ಏಷ್ಯಾದ ಷೇರುಪೇಟೆಗಳಲ್ಲಿ ಏರಿಳಿತದಿಂದ ತಲ್ಲಣ ಉಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.