
ಜಿಯೊ
ನವದೆಹಲಿ: ಗೂಗಲ್ ಕಂಪನಿಯ ಎ.ಐ. ಪರಿಕರವಾಗಿರುವ ‘ಜೆಮಿನಿ ಪ್ರೊ’ವನ್ನು ತನ್ನ ಬಳಕೆದಾರರಿಗೆ 18 ತಿಂಗಳ ಅವಧಿಗೆ ಉಚಿತವಾಗಿ, ವಯಸ್ಸಿನ ನಿರ್ಬಂಧ ಇಲ್ಲದೆ ನೀಡಲಾಗುತ್ತದೆ ಎಂದು ಜಿಯೊ ಕಂಪನಿಯು ಬುಧವಾರ ಹೇಳಿದೆ.
ಜೆಮಿನಿ ಪ್ರೊ ಯೋಜನೆಯ 18 ತಿಂಗಳ ಚಂದದಾರಿಕೆಯ ಮೌಲ್ಯವು ₹35,100 ಎಂದು ಜಿಯೊ ಹೇಳಿದೆ. ‘ಅನ್ಲಿಮಿಟೆಡ್ 5ಜಿ’ ಬಳಕೆ ಮಾಡುತ್ತಿರುವ ಎಲ್ಲ ಅರ್ಹ ಗ್ರಾಹಕರಿಗೆ ಈ ಕೊಡುಗೆ ಸಿಗಲಿದೆ ಎಂದು ಕಂಪನಿ ಹೇಳಿದೆ.
‘ಗೂಗಲ್ ಎ.ಐ. ಪ್ರೊ’ ಚಂದಾದಾರಿಕೆಯನ್ನು ಅರ್ಹ ಬಳಕೆದಾರರಿಗೆ 18 ತಿಂಗಳು ಉಚಿತವಾಗಿ ನೀಡಲಾಗುತ್ತದೆ ಎಂದು ಕಂಪನಿಯು ಈ ಮೊದಲೇ ಹೇಳಿತ್ತು. ಆದರೆ 18 ವರ್ಷದಿಂದ 25 ವರ್ಷದ ನಡುವಿನವರಿಗೆ ಇದನ್ನು ಆದ್ಯತೆಯ ಮೇರೆಗೆ ನೀಡಲಾಗುತ್ತದೆ ಎಂದು ಕಂಪನಿ ಹೇಳಿತ್ತು. ಈಗ ವಯಸ್ಸಿನ ನಿರ್ಬಂಧವನ್ನು ಇಲ್ಲವಾಗಿಸಿದೆ.
ಮೈ ಜಿಯೊ ಆ್ಯಪ್ ಬಳಸಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಗೂಗಲ್ ಕಂಪನಿಯು ‘ಜೆಮಿನಿ 3’ಯನ್ನು ತಾನು ಇದುವರೆಗೆ ಅಭಿವೃದ್ಧಿಪಡಿಸಿರುವ ‘ಅತ್ಯಂತ ಬುದ್ಧಿವಂತ ಮಾದರಿ’ ಎಂದು ಕರೆದಿದೆ.
ವಿವರಣೆಗೆ ಕಾರಣ ಒದಗಿಸುವಲ್ಲಿ ಜೆಮಿನಿ 3 ಆವೃತ್ತಿಯು ಅತ್ಯಾಧುನಿಕವಾಗಿದೆ, ಸೃಜನಶೀಲ ಆಲೋಚನೆಗಳಲ್ಲಿನ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳುವಂತೆ ಇದನ್ನು ರೂಪಿಸಲಾಗಿದೆ, ಕ್ಲಿಷ್ಟಕರವಾದ ಸಮಸ್ಯೆಯೊಂದನ್ನು ಪರಿಹರಿಸುವ ವಿಚಾರದಲ್ಲಿಯೂ ಇದು ಮುಂದಿದೆ ಎಂದು ಗೂಗಲ್ ಹೇಳಿದೆ.
ಬಳಕೆದಾರರು ಇರಿಸುವ ಮನವಿಯ ಉದ್ದೇಶ ಏನು, ಅದರ ಒಟ್ಟು ಅರ್ಥ ಏನು ಎಂಬುದನ್ನು ಅರ್ಥ ಮಾಡಿಕೊಳ್ಳುವ ವಿಚಾರದಲ್ಲಿ ಜೆಮಿನಿ 3 ಬಹಳ ಸುಧಾರಣೆ ಕಂಡಿದೆ ಎಂದು ಗೂಗಲ್ ತಿಳಿಸಿದೆ.
ದೇಶದ ದೂರಸಂಪರ್ಕ ಸೇವಾ ಕಂಪನಿಯು ಎ.ಐ. ಸೇವೆ ಒದಗಿಸುವ ಮೂಲಕ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಲು ಯತ್ನಿಸುತ್ತಿರುವ ಸಂದರ್ಭದಲ್ಲಿ ಜಿಯೊ ಕಂಪನಿಯು ಈ ಕೊಡುಗೆಯನ್ನು ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.