ನವದೆಹಲಿ: ನ್ಯಾಷನಲ್ ಕ್ರಿಟಿಕಲ್ ಮಿನರಲ್ ಮಿಷನ್‌ಗೆ ₹16,300 ಕೋಟಿ ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮಿಷನ್‌ನಡಿ ಮುಂದಿನ ಏಳು ವರ್ಷಗಳಲ್ಲಿ ₹34,300 ಕೋಟಿ ವೆಚ್ಚ ಮಾಡಲು ನಿರ್ಧರಿಸಿದೆ.
ಮಿಷನ್‌ನಡಿ 24 ಅಮೂಲ್ಯ ಖನಿಜಗಳನ್ನು ಗುರುತಿಸಲಾಗಿದೆ. ಈ ನಿರ್ಣಾಯಕ ಖನಿಜಗಳ ಪರಿಶೋಧನೆಗೆ ಆರ್ಥಿಕ ನೆರವು ಲಭಿಸಲಿದೆ.
2024–25ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರವು ಈ ಮಿಷನ್ ಅನ್ನು ಘೋಷಿಸಿತ್ತು. ಹಸಿರು ಶಕ್ತಿ ಪರಿವರ್ತನೆಯಲ್ಲಿ ಸ್ವಾವಲಂಬನೆ ಸಾಧಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ತಾಮ್ರ, ಲಿಥಿಯಂ, ನಿಕ್ಕಲ್, ಕೋಬಾಲ್ಟ್ ಸೇರಿ ಅಪರೂಪದ ಖನಿಜಗಳು ನವೀಕರಿಸಬಹುದಾದ ಇಂಧನ ಉತ್ಪಾದನೆ, ವಿಂಡ್ ಟರ್ಬೈನ್, ಇ.ವಿ ವಾಹನ ಮತ್ತು ಬ್ಯಾಟರಿ ತಯಾರಿಕೆಯಲ್ಲಿ ನಿರ್ಣಾಯಕವಾಗಿವೆ ಎಂದು ಕೇಂದ್ರ ಖನಿಜಗಳ ಸಚಿವಾಲಯ ಹೇಳಿದೆ.
ಈ ಖನಿಜಗಳ ಪರಿಶೋಧನೆಗೆ ನೆರವು ಸಿಗಲಿದೆ. ಆಮದು ಅವಲಂಬನೆ ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ಸಾಗರೋತ್ತರ ಪ್ರದೇಶಗಳಲ್ಲಿ ಈ ಖನಿಜ ಪ್ರದೇಶಗಳ ಸ್ವಾಧೀನ, ಅವುಗಳ ಸಂಸ್ಕರಣೆ ಮತ್ತು ಮರುಬಳಕೆಗೆ ತಂತ್ರಜ್ಞಾನ ಅಭಿವೃದ್ಧಿಗೆ ಸಮಗ್ರ ಯೋಜನೆ ಸಿದ್ಧಪಡಿಸುವುದು ಈ ಮಿಷನ್‌ನ ಗುರಿಯಾಗಿದೆ ಹೇಳಿದೆ.
ಈ ಮಿಷನ್‌ಗೆ ಸಾರ್ವಜನಿಕ ಉದ್ದಿಮೆಗಳು ₹18 ಸಾವಿರ ಕೋಟಿ ನೆರವು ನೀಡಲಿವೆ. ಇದರಿಂದ ದೇಶದಲ್ಲಿ ಅಮೂಲ್ಯ ಖನಿಜಗಳ ಪರಿಶೋಧನೆಗೆ ನೆರವಾಗಲಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.