ADVERTISEMENT

DAP ರಸಗೊಬ್ಬರದ ಮೇಲಿನ ಸಬ್ಸಿಡಿ ಮುಂದುವರಿಕೆ: ಕೇಂದ್ರ ಸಂಪುಟ ಒಪ್ಪಿಗೆ

ಪಿಟಿಐ
Published 1 ಜನವರಿ 2025, 13:42 IST
Last Updated 1 ಜನವರಿ 2025, 13:42 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಡಿ-ಅಮೋನಿಯಂ ಫಾಸ್ಫೇಟ್ (ಡಿಎಪಿ) ಮೇಲಿನ ವಿಶೇಷ ಸಬ್ಸಿಡಿ ಸೌಲಭ್ಯವನ್ನು ವಿಸ್ತರಿಸಿದೆ.

ರೈತರು ಪ್ರತಿ ಚೀಲವನ್ನು (50 ಕೆ.ಜಿ) ₹1,350 ಚಿಲ್ಲರೆ ದರದಲ್ಲಿ ಖರೀದಿಸಲು ಅನುಕೂಲವಾಗಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ₹3,850 ಕೋಟಿ ಹೊರೆಯಾಗಲಿದೆ. ಈ ಸಬ್ಸಿಡಿಯು ಜನವರಿ 1ರಿಂದ ಜಾರಿಗೆ ಬರಲಿದ್ದು, ಮುಂದಿನ ಆದೇಶದ ವರೆಗೆ ಜಾರಿಯಲ್ಲಿ ಇರಲಿದೆ ಎಂದು ಕೇಂದ್ರ ತಿಳಿಸಿದೆ.

ADVERTISEMENT

ಕಳೆದ ವರ್ಷ ಸರ್ಕಾರವು ಏಪ್ರಿಲ್‌ನಿಂದ ಡಿಸೆಂಬರ್‌ಗೆ ಅನ್ವಯಿಸುವಂತೆ ಒಂದು ಟನ್‌ಗೆ ₹3,500 ವಿಶೇಷ ಸಬ್ಸಿಡಿಗೆ ಅನುಮತಿ ನೀಡಿತ್ತು. ಈ ಅವಧಿಯಲ್ಲಿ ಏರುತ್ತಿರುವ ವೆಚ್ಚ ಸರಿದೂಗಿಸಲು ₹2,625 ಕೋಟಿ ಪ್ಯಾಕೇಜ್‌ ಘೋಷಿಸಿತ್ತು. 

ಪೋಷಕಾಂಶ ಆಧರಿತ ಸಬ್ಸಿಡಿ ಯೋಜನೆಯಡಿ ರೈತರಿಗೆ ಕೈಗೆಟಕುವ ದರದಲ್ಲಿ ಡಿಎಪಿ ರಸಗೊಬ್ಬರ ಒದಗಿಸಲು ಈ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್‌, ‘ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ರೈತರಿಗೆ ಅನುಕೂಲ ಕಲ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದರು.

ಜಾಗತಿಕ ಬಿಕ್ಕಟ್ಟಿನಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಿಎಪಿ ರಸಗೊಬ್ಬರ ಬೆಲೆಯು ಏಕಾಏಕಿ ಬದಲಾವಣೆ ಕಾಣುತ್ತಿದೆ ಎಂದು ತಿಳಿಸಿದರು. 

ರಸಗೊಬ್ಬರ ತಯಾರಕರು ಮತ್ತು ಆಮದುದಾರರ ಮೂಲಕ ಸರ್ಕಾರವು ಸಬ್ಸಿಡಿ ದರದಲ್ಲಿ 28 ಗ್ರೇಡ್‌ ಗುಣಮಟ್ಟದ ಪಿ ಆ್ಯಂಡ್‌ ಕೆ (ಫಾಸ್ಪೆಟಿಕ್ ಮತ್ತು ಪೊಟ್ಯಾಸಿಕ್) ರಸಗೊಬ್ಬರವನ್ನು ರೈತರಿಗೆ ಒದಗಿಸುತ್ತಿದೆ. ಪೋಷಕಾಂಶ ಆಧರಿತ ಸಬ್ಸಿಡಿ ಯೋಜನೆಯಡಿ 2010ರ ಏಪ್ರಿಲ್‌ 1ರಿಂದ ಈ ರಸಗೊಬ್ಬರಕ್ಕೆ ಸಬ್ಸಿಡಿ ಸೌಲಭ್ಯ ಕಲ್ಪಿಸಲಾಗಿದೆ.

  • ₹5.5 ಲಕ್ಷ ಕೋಟಿ–2004ರಿಂದ 2014ರ ವರೆಗೆ ರಸಗೊಬ್ಬರಕ್ಕೆ ನೀಡಿರುವ ಸಬ್ಸಿಡಿ ಮೊತ್ತ 

  • ₹11.9 ಲಕ್ಷ ಕೋಟಿ–2014–2024ರವರೆಗೆ ರಸಗೊಬ್ಬರಕ್ಕೆ ನೀಡಿರುವ ಸಬ್ಸಿಡಿ ಮೊತ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.