ADVERTISEMENT

ದ್ರಾಕ್ಷಿ | ಕೈಸೇರದ ವಿಮೆ ಪರಿಹಾರ: 31,470 ರೈತರಿಂದ ₹39 ಕೋಟಿ ಪ್ರೀಮಿಯಂ ಪಾವತಿ

ಇಮಾಮ್‌ಹುಸೇನ್‌ ಗೂಡುನವರ
Published 31 ಅಕ್ಟೋಬರ್ 2025, 23:30 IST
Last Updated 31 ಅಕ್ಟೋಬರ್ 2025, 23:30 IST
<div class="paragraphs"><p>ಅಥಣಿ ತಾಲ್ಲೂಕಿನ ತೆಲಸಂಗದಲ್ಲಿ ಹಾನಿಗೀಡಾದ ದ್ರಾಕ್ಷಿ ಬೆಳೆ&nbsp;</p></div>

ಅಥಣಿ ತಾಲ್ಲೂಕಿನ ತೆಲಸಂಗದಲ್ಲಿ ಹಾನಿಗೀಡಾದ ದ್ರಾಕ್ಷಿ ಬೆಳೆ 

   

ಬೆಳಗಾವಿ: ಬೆಳೆ ವಿಮೆ (ಫಸಲ್‌ ಬಿಮಾ) ಯೋಜನೆಯಡಿ 2024ರ ಏಪ್ರಿಲ್‌ನಿಂದ 2025ರ ಮಾರ್ಚ್‌ ಅವಧಿಯಲ್ಲಿ ದ್ರಾಕ್ಷಿ ಬೆಳೆಗೆ ವಿಮೆ ಮಾಡಿಸಿದ್ದ ರಾಜ್ಯದ 31,470 ಬೆಳೆಗಾರರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. 

ದ್ರಾಕ್ಷಿಯನ್ನು ವಿಜಯಪುರ, ಬೆಳಗಾವಿ, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಕಲಬುರಗಿ, ಕೊಪ್ಪಳ, ಯಾದಗಿರಿ, ಬೀದರ್‌, ಕೋಲಾರ ಜಿಲ್ಲೆಗಳಲ್ಲಿ ಹವಾಮಾನ ಆಧಾರಿತ ಬೆಳೆಯಾಗಿ ಬೆಳೆಯಲಾಗುತ್ತದೆ. ರಾಜ್ಯದಲ್ಲಿ 42 ಸಾವಿರ ಹೆಕ್ಟೇರ್‌ಗಿಂತ ಹೆಚ್ಚಿನ ಪ್ರದೇಶದಲ್ಲಿ ಬೆಳೆ ಇದೆ. ಮಳೆ, ಪ್ರತಿಕೂಲ ಹವಾಮಾನದಿಂದ ಕಳೆದ ವರ್ಷ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿತ್ತು.

ADVERTISEMENT

ಬೆಳೆ ವಿಮೆ ಯೋಜನೆಯಡಿ 31,470 ರೈತರು ಹೆಕ್ಟೇರ್‌ಗೆ ₹14 ಸಾವಿರ ಪ್ರೀಮಿಯಂ ಪಾವತಿಸಿದ್ದರು. 27,953 ಹೆಕ್ಟೇರ್‌ ವಿಮೆ ಯೋಜನೆಗೆ ಒಳಪಟ್ಟಿತ್ತು. ₹ 39.13 ಕೋಟಿ ವಿಮೆ ಮೊತ್ತ ಪಾವತಿಯಾಗಿತ್ತು.  

ಬೆಳೆ ಹಾನಿಯಾದರೆ ಪ್ರತಿ ಹೆಕ್ಟೇರ್‌ಗೆ ₹2.80 ಲಕ್ಷ ಪರಿಹಾರ ಬರಬೇಕಿತ್ತು. ಆದರೆ, ವಿಮೆ ಅವಧಿ ಮುಗಿದರೂ ಹಣ ಕೈಸೇರಿಲ್ಲ. ಪ್ರಕ್ರಿಯೆ ವಿಳಂಬವಾಗಿದ್ದರಿಂದ ರೈತರು ಇಕ್ಕಟ್ಟಿಗೆ ಸಿಲುಕಿದ್ದಾರೆ.

‘ನಾನು ನಾಲ್ಕು ಎಕರೆಯಲ್ಲಿ ದ್ರಾಕ್ಷಿ ಬೆಳೆದಿದ್ದು, ವಿಮೆಯನ್ನೂ  ಮಾಡಿಸಿದ್ದೆ. ಹವಾಮಾನ ವೈಪರೀತ್ಯದಿಂದ ಬೆಳೆ ಕೈಕೊಟ್ಟಿತು. ಈಗ ವಿಮೆ ಪರಿಹಾರವೂ ಸಿಗದೆ ತೊಂದೆರೆಯಾಗಿದೆ’ ಎಂದು ಅಥಣಿ ತಾಲ್ಲೂಕಿನ ತೆಲಸಂಗದ ರೈತ ರವಿ ಕಾರಿಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

 ‘ಅಕ್ರಮವಾಗಿ ವಿಮೆ ಪರಿಹಾರ ಪಡೆಯಲು ಕೆಲ ರೈತರು ಯತ್ನಿಸಿದ್ದಾರೆ. ದ್ರಾಕ್ಷಿ ಬೆಳೆಯದಿದ್ದರೂ ವಿಮೆ ಮಾಡಿಸಿದ್ದಾರೆ ಎಂಬ ಆರೋಪವಿದೆ. ತನಿಖೆ ನಂತರ ಪರಿಹಾರ ಕೊಡುತ್ತೇವೆ ಎಂದು ವಿಮೆ ಕಂಪನಿ ಅಧಿಕಾರಿಗಳು ಹೇಳುತ್ತಾರೆ’ ಎಂದು ಅವರು ಹೇಳಿದರು.

ದ್ರಾಕ್ಷಿ ಬೆಳೆಗಾರರ ಬದುಕಿನೊಂದಿಗೆ ವಿಮೆ ಕಂಪನಿಯವರು ಚೆಲ್ಲಾಟವಾಡಬಾರದು. ಪರಿಹಾರ ಪಾವತಿ ವಿಳಂಬ ಮಾಡಬಾರದು.
-ಅಭಯಕುಮಾರ್‌ ನಾಂದ್ರೇಕರ, ಅಧ್ಯಕ್ಷ ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘ
ವಿಮೆ ಪರಿಹಾರ ಪಡೆಯಲು ಕೆಲ ರೈತರು ಅಕ್ರಮವೆಸಗಿದ ಆರೋಪವಿದೆ. ಹೊಲಕ್ಕೆ ಹೋಗಿ ಪರಿಶೀಲಿಸುತ್ತೇವೆ. ಈ ಗೊಂದಲದಿಂದ ಪರಿಹಾರ ಪಾವತಿಯಲ್ಲಿ ವಿಳಂಬವಾಗಿರುವುದು ನಿಜ
-ವಿಮೆ ಅಧಿಕಾರಿ, ಅಗ್ರಿಕಲ್ಚರ್‌ ಇನ್ಶುರೆನ್ಸ್‌ ವಿಮೆ ಕಂಪನಿ
ವಿಮೆ ಮಾಡಿಸಿದ ರೈತರಿಗೆ ಪರಿಹಾರ ಕೊಡಲು ಪ್ರಕ್ರಿಯೆ ಆರಂಭಿಸಲಾಗಿದೆ. 15 ದಿನಗಳಲ್ಲಿ ಪರಿಹಾರ ಕೈಗೆಟುಕಲಿದೆ.
-ಮಹಾಂತೇಶ ಮುರಗೋಡ, ಜಂಟಿ ನಿರ್ದೇಶಕ ತೋಟಗಾರಿಕೆ ಇಲಾಖೆ ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.