ಸಾಂಕೇತಿಕ ಚಿತ್ರ
ನವದೆಹಲಿ: ಸೆಪ್ಟೆಂಬರ್ ಅಂತ್ಯಕ್ಕೆ ದೇಶದ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ವಸೂಲಾಗದ ಸಾಲದ (ಎನ್‌ಪಿಎ) ಸರಾಸರಿ ಪ್ರಮಾಣವು ಶೇ 3.09ರಷ್ಟಿದ್ದು, ಒಟ್ಟು ₹3.16 ಲಕ್ಷ ಕೋಟಿ ಸಾಲ ಬಾಕಿ ಉಳಿದಿದೆ ಎಂದು ಕೇಂದ್ರ ಸರ್ಕಾರವು, ಮಂಗಳವಾರ ಸಂಸತ್‌ಗೆ ತಿಳಿಸಿದೆ.
ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ ಅವರು, ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ನೀಡಿರುವ ಮಾಹಿತಿ ಪ್ರಕಾರ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ₹1.34 ಲಕ್ಷ ಕೋಟಿ ಸಾಲ ವಸೂಲಾಗಿಲ್ಲ. ಸರಾಸರಿ ಎನ್‌ಪಿಎ ಶೇ 1.86ರಷ್ಟಿದೆ ಎಂದು ವಿವರಿಸಿದ್ದಾರೆ.
ಪ್ರಸಕ್ತ ವರ್ಷದ ಮಾರ್ಚ್ ಅಂತ್ಯಕ್ಕೆ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ₹50 ಕೋಟಿಗೂ ಹೆಚ್ಚು ಸಾಲ ಬಾಕಿ ಉಳಿಸಿಕೊಂಡಿರುವ 580 ಸಾಲಗಾರರು ಇದ್ದಾರೆ ಎಂದು ಹೇಳಿದ್ದಾರೆ.
ಸಾಲ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಹಾಗೂ ವಸೂಲಾತಿಗೆ ಸರ್ಕಾರ ಯಾವ ಕ್ರಮಕೈಗೊಂಡಿದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಸೆಪ್ಟೆಂಬರ್ ಅಂತ್ಯಕ್ಕೆ 1,068 ಕಾರ್ಪೊರೇಟ್ ದಿವಾಳಿ ಪ್ರಕ್ರಿಯೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ವಿವರಿಸಿದ್ದಾರೆ.
ಎಲ್ಲಾ ಬ್ಯಾಂಕ್‌ಗಳಿಂದ ವಸೂಲಾಗದ ಸಾಲದ ಮೊತ್ತ ₹11.45 ಲಕ್ಷ ಕೋಟಿ ಆಗಿದೆ. ಈ ಸಾಲವನ್ನು ರೈಟ್–ಆಫ್ ಮಾಡಲಾಗಿದೆ. ಅಂದರೆ ಈ ಸಾಲಗಳನ್ನು ಬ್ಯಾಂಕ್‌ಗಳು ತಮ್ಮ ಬ್ಯಾಲೆನ್ಸ್‌ಶೀಟ್‌ನಿಂದ ಹೊರಗಿಟ್ಟಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.