ADVERTISEMENT

ಜಿಎಸ್‌ಟಿ: ಬಳಸಿದ ಇ.ವಿ ಕಾರು, ಪಾಪ್‌ಕಾರ್ನ್‌ ತುಟ್ಟಿ

ಪಿಟಿಐ
Published 21 ಡಿಸೆಂಬರ್ 2024, 16:19 IST
Last Updated 21 ಡಿಸೆಂಬರ್ 2024, 16:19 IST
<div class="paragraphs"><p>ಜಿಎಸ್‌ಟಿ</p></div>

ಜಿಎಸ್‌ಟಿ

   

ಜೈಸಲ್ಮೇರ್: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸರಕು ಮತ್ತು ಸೇವಾ ತೆರಿಗೆ ಮಂಡಳಿಯ 55ನೇ ಸಭೆಯು, ವಿದ್ಯುತ್‌ಚಾಲಿತ ಹಳೆಯ ಕಾರುಗಳ ಮಾರಾಟದ ಮೇಲಿನ ಜಿಎಸ್‌ಟಿಯನ್ನು ಶೇ 12ರಿಂದ ಶೇ 18ಕ್ಕೆ ಹೆಚ್ಚಿಸಲು ನಿರ್ಧರಿಸಿದೆ. 

ವಿಮಾನ ಇಂಧನವನ್ನು (ಎಟಿಎಫ್‌) ಜಿಎಸ್‌ಟಿ ವ್ಯಾಪ್ತಿಗೆ ಒಳಪಡಿಸಲು ಸಭೆಯು ಒ‍‍ಪ್ಪಿಗೆ ನೀಡಿಲ್ಲ.

ADVERTISEMENT

ಉಪ್ಪು ಮತ್ತು ಮಸಾಲೆ ಮಿಶ್ರಿತ (ಪ್ಯಾಕಿಂಗ್‌ರಹಿತ) ಪಾಪ್‌ಕಾರ್ನ್‌ಗೆ ಶೇ 5, ಪ್ಯಾಕಿಂಗ್‌ ಮತ್ತು ಲೇಬಲ್‌ ಅಂಟಿಸಿದ ಪಾಪ್‌ಕಾರ್ನ್‌ಗೆ ಶೇ 12ರಷ್ಟು ಹಾಗೂ ಕ್ಯಾರಮೆಲ್ ಪಾಪ್‌ಕಾರ್ನ್‌ಗೆ (ಸಕ್ಕರೆ ಮಿಶ್ರಿತ) ಶೇ 18ರಷ್ಟು ತೆರಿಗೆ ವಿಧಿಸಲು ತೀರ್ಮಾನಿಸಿದೆ.

ಪ್ಯಾಕಿಂಗ್‌ ಹಾಗೂ ಲೇಬಲ್‌ ಅಂಟಿಸಿದ ಪಾಪ್‌ಕಾರ್ನ್‌ ಮೇಲಿನ ತೆರಿಗೆ ಬಗೆಗಿನ ಗೊಂದಲ ಕುರಿತು ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್‌ ಮಂಡಳಿಯು (ಸಿಬಿಐಸಿ) ಸುತ್ತೋಲೆ ಮೂಲಕ ಸ್ಪಷ್ಟನೆ ನೀಡಲಿದೆ ಎಂದು ಸಭೆಯು ತಿಳಿಸಿದೆ.

ಯಾವುದು ಇಳಿಕೆ?:

ಸಾರವರ್ಧಿತ ಅಕ್ಕಿ ಮೇಲಿನ ತೆರಿಗೆಯನ್ನು ಶೇ 18ರಿಂದ ಶೇ 5ಕ್ಕೆ ತಗ್ಗಿಸಿದೆ. ಶೇ 50ಕ್ಕಿಂತ ಹೆಚ್ಚು ಹಾರು ಬೂದಿಯಿಂದ ತಯಾರಿಸಿದ ಎಸಿಸಿ ಬ್ಲಾಕ್‌ಗಳ ಮೇಲಿನ ತೆರಿಗೆಯನ್ನು ಶೇ 18ರಿಂದ ಶೇ 12ಕ್ಕೆ ಇಳಿಸಿದೆ. ಜೀನ್‌ ಥೆರಪಿ ಚಿಕಿತ್ಸೆಗೆ ತೆರಿಗೆ ವಿನಾಯಿತಿ ನೀಡಲಾಗಿದೆ.

ಸಾಲದ ನಿಯಮ ಪಾಲನೆ ಮಾಡದ ಸಾಲಗಾರರಿಗೆ, ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳು ವಿಧಿಸುವ ಮತ್ತು ಸಂಗ್ರಹಿಸುವ ದಂಡ ಶುಲ್ಕದ ಮೇಲೆ ಜಿಎಸ್‌ಟಿ ವಿನಾಯಿತಿ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.