ADVERTISEMENT

ಜಿಎಸ್‌ಟಿ | ಡಿಸೆಂಬರ್‌ ತಿಂಗಳಿನಲ್ಲಿ ₹1.74 ಲಕ್ಷ ಕೋಟಿ ಸಂಗ್ರಹ: ಕೇಂದ್ರ

ಮರುಪಾವತಿಯಲ್ಲಿ ಶೇ 31ರಷ್ಟು ಹೆಚ್ಚಳ । ಸೆಸ್ ಸಂಗ್ರಹದಲ್ಲಿ ಇಳಿಕೆ: ಕೇಂದ್ರ

ಪಿಟಿಐ
Published 1 ಜನವರಿ 2026, 18:56 IST
Last Updated 1 ಜನವರಿ 2026, 18:56 IST
ಜಿಎಸ್‌ಟಿ
ಜಿಎಸ್‌ಟಿ   

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ಡಿಸೆಂಬರ್‌ ತಿಂಗಳಿನಲ್ಲಿ ₹1,74,550 ಕೋಟಿ ವರಮಾನ ಸಂಗ್ರಹವಾಗಿದೆ.

2024ರ ಡಿಸೆಂಬರ್‌ನಲ್ಲಿ ₹1.64 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿತ್ತು. ಇದಕ್ಕೆ ಹೋಲಿಸಿದರೆ 2025ರ ಡಿಸೆಂಬರ್‌ನ ವರಮಾನ ಸಂಗ್ರಹ ಶೇ 6.1ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರದ ಅಂಕಿ–ಅಂಶಗಳು ಗುರುವಾರ ತಿಳಿಸಿವೆ. ನವೆಂಬರ್‌ನಲ್ಲಿ ₹1.70 ಲಕ್ಷ ಕೋಟಿ ಸಂಗ್ರಹವಾಗಿತ್ತು.

ಒಟ್ಟು ಜಿಎಸ್‌ಟಿ ಸಂಗ್ರಹದ ಪೈಕಿ, ದೇಶದ ಆಂತರಿಕ ವಹಿವಾಟುಗಳಿಂದ ಬರುವ ಜಿಎಸ್‌ಟಿ ವರಮಾನವು ಶೇ 1.2ರಷ್ಟು ಏರಿಕೆ ಕಂಡಿದ್ದು, ₹1.22 ಲಕ್ಷ ಕೋಟಿಯಾಗಿದೆ. ಆಮದು ಮಾಡಿಕೊಂಡ ಸರಕುಗಳಿಂದ ಬಂದ ವರಮಾನವು ₹51,977 ಕೋಟಿಯಾಗಿದ್ದು, ಶೇ 19.7ರಷ್ಟು ಏರಿಕೆಯಾಗಿದೆ.

ADVERTISEMENT

ಜಿಎಸ್‌ಟಿ ಮರುಪಾವತಿಯಲ್ಲಿ ಶೇ 31ರಷ್ಟು ಹೆಚ್ಚಳವಾಗಿದ್ದು, ₹28,980 ಕೋಟಿಯಾಗಿದೆ. ನಿವ್ವಳ ಜಿಎಸ್‌ಟಿ ಸಂಗ್ರಹವು ₹1.45 ಲಕ್ಷ ಕೋಟಿಯಾಗಿದೆ ಎಂದು ತಿಳಿಸಿದೆ.

2024ರ ಡಿಸೆಂಬರ್‌ನಲ್ಲಿ ಸೆಸ್ ಮೂಲಕ ₹12,003 ಕೋಟಿ ಸಂಗ್ರಹವಾಗಿತ್ತು. ಅದು ಕಳೆದ ಡಿಸೆಂಬರ್‌ನಲ್ಲಿ ₹4,238 ಕೋಟಿಗೆ ಇಳಿದಿದೆ.

ಜಿಎಸ್‌ಟಿ ಮಂಡಳಿಯು ಸೆಪ್ಟೆಂಬರ್ 22ರಂದು ಜಿಎಸ್‌ಟಿ ದರ ಪರಿಷ್ಕರಣೆ ಮಾಡಿತು. ಇದರಿಂದ ಹಲವು ಸರಕುಗಳ ಬೆಲೆ ಕಡಿಮೆ ಆಯಿತು. ಇದು ವರಮಾನ ಸಂಗ್ರಹ ಇಳಿಕೆಗೆ ಕಾರಣವಾಗಿದೆ. ನವೆಂಬರ್‌ ತಿಂಗಳಿಗೆ ಹೋಲಿಸಿದರೆ ಡಿಸೆಂಬರ್‌ನಲ್ಲಿ ವರಮಾನ ಸಂಗ್ರಹದಲ್ಲಿ ಏರಿಕೆ ಕಂಡು ಬಂದಿದೆ.

‘ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳಿನಲ್ಲಿ ಜಿಎಸ್‌ಟಿ ಸಂಗ್ರಹವು ಸದೃಢವಾಗಿತ್ತು. ಆದರೆ, ಜಿಎಸ್‌ಟಿ ದರ ಪರಿಷ್ಕರಣೆಯ ಬಳಿಕ ಸಂಗ್ರಹದ ಪ್ರಮಾಣವು ಇಳಿಕೆ ಕಂಡಿದೆ’ ಎಂದು ಡೆಲಾಯ್ಟ್ ಇಂಡಿಯಾ ಪಾಲುದಾರ ಎಂ.ಎಸ್. ಮಣಿ ಹೇಳಿದರು.

‘ಮಹಾರಾಷ್ಟ್ರ, ಗುಜರಾತ್‌, ಕರ್ನಾಟಕ ಮತ್ತು ಹರಿಯಾಣವು ಜಿಎಸ್‌ಟಿ ಸಂಗ್ರಹಕ್ಕೆ ಹೆಚ್ಚಿನ ಕೊಡುಗೆ ನೀಡಿವೆ’ ಎಂದು ಗ್ರಾಂಟ್ ಥಾರ್ನ್‌ಟನ್ ಭಾರತ್ ಪಾಲುದಾರ ಮನೋಜ್ ಮಿಶ್ರಾ ಹೇಳಿದ್ದಾರೆ.

ಕರ್ನಾಟಕದಲ್ಲಿ ಶೇ 5ರಷ್ಟು ಬೆಳವಣಿಗೆ
ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕವು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. 2024ರ ಡಿಸೆಂಬರ್‌ನಲ್ಲಿ ₹6389 ಕೋಟಿ ಜಿಎಸ್‌ಟಿ ಸಂಗ್ರಹವಾಗಿತ್ತು. ಇದು ಕಳೆದ ವರ್ಷದ ಡಿಸೆಂಬರ್‌ನಲ್ಲಿ ₹6716 ಕೋಟಿಗೆ ಏರಿಕೆಯಾಗಿದ್ದು ಶೇ 5ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಮಹಾರಾಷ್ಟ್ರವು ಅತಿ ಹೆಚ್ಚು ₹16140 ಕೋಟಿ ಜಿಎಸ್‌ಟಿ ಸಂಗ್ರಹಿಸಿದ ರಾಜ್ಯ ಎನಿಸಿದೆ. ಜಿಎಸ್‌ಟಿ ಸಂಗ್ರಹ ಬೆಳವಣಿಗೆ ದರ ಶೇ 15ರಷ್ಟಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.