
ಜಿಎಸ್‌ಟಿ
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ಜನವರಿ ತಿಂಗಳಿನಲ್ಲಿ ಒಟ್ಟು ₹1.93 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದ್ದು, ಶೇ 6.2ರಷ್ಟು ಏರಿಕೆ ಆಗಿದೆ. ಜಿಎಸ್‌ಟಿ ಸಂಗ್ರಹ ಮೊತ್ತವು ಮೂರು ತಿಂಗಳ ಗರಿಷ್ಠ.
ನವೆಂಬರ್ ತಿಂಗಳಿನಲ್ಲಿ ₹1.70 ಲಕ್ಷ ಕೋಟಿ, ಡಿಸೆಂಬರ್‌ನಲ್ಲಿ ₹1.74 ಲಕ್ಷ ಕೋಟಿ ಮತ್ತು ಅಕ್ಟೋಬರ್‌ನಲ್ಲಿ ₹1.96 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿತ್ತು.
ಜಿಎಸ್‌ಟಿ ಮರುಪಾವತಿಯಲ್ಲಿ (ರೀಫಂಡ್) ಶೇ 3.1ರಷ್ಟು ಕಡಿಮೆ ಆಗಿದ್ದು, ₹22,665 ಕೋಟಿಯಾಗಿದೆ. ನಿವ್ವಳ ಜಿಎಸ್‌ಟಿ ಸಂಗ್ರಹವು ₹1.71 ಲಕ್ಷ ಕೋಟಿಯಾಗಿದೆ ಎಂದು ಕೇಂದ್ರ ಸರ್ಕಾರ ಭಾನುವಾರ ತಿಳಿಸಿದೆ.
ಒಟ್ಟು ಜಿಎಸ್‌ಟಿ ಸಂಗ್ರಹದ ಪೈಕಿ, ದೇಶದ ಆಂತರಿಕ ವಹಿವಾಟುಗಳಿಂದ ಬರುವ ಜಿಎಸ್‌ಟಿ ವರಮಾನವು ಶೇ 4.8ರಷ್ಟು ಏರಿಕೆ ಕಂಡಿದ್ದು, ₹1.41 ಲಕ್ಷ ಕೋಟಿಯಾಗಿದೆ. ಆಮದು ಮಾಡಿಕೊಂಡ ಸರಕುಗಳಿಂದ ಬಂದ ವರಮಾನವು ₹52,253 ಕೋಟಿಯಾಗಿದ್ದು, ಶೇ 10.1ರಷ್ಟು ಏರಿಕೆಯಾಗಿದೆ.
ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಜನವರಿವರೆಗೆ ₹18.43 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.