ADVERTISEMENT

ಜಿಎಸ್‌ಟಿ: ₹1.49 ಲಕ್ಷ ಕೋಟಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 21:15 IST
Last Updated 1 ಆಗಸ್ಟ್ 2022, 21:15 IST
   

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ಜುಲೈನಲ್ಲಿ ₹1.49 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ.

ಜಿಎಸ್‌ಟಿ ವ್ಯವಸ್ಥೆಯಡಿ ಸಂಗ್ರಹ ಆಗಿರುವ ಎರಡನೇ ಗರಿಷ್ಠ ಮೊತ್ತ ಇದಾಗಿದೆ. ಈ ಹಿಂದೆ, ಏಪ್ರಿಲ್‌ನಲ್ಲಿ ₹ 1.68 ಲಕ್ಷ ಕೋಟಿಯ ದಾಖಲೆಯ ಮೊತ್ತ ಸಂಗ್ರಹ ಆಗಿತ್ತು.

2021ರ ಜುಲೈನಲ್ಲಿ ಜಿಎಸ್‌ಟಿ ಮೂಲಕ ₹ 1.16 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಶೇಕಡ 28ರಷ್ಟು ಹೆಚ್ಚು ವರಮಾನ ಸಂಗ್ರಹ ಆಗಿದೆ.

ADVERTISEMENT

ಆರ್ಥಿಕ ಚೇತರಿಕೆ ಮತ್ತು ತೆರಿಗೆ ವಂಚನೆ ತಡೆಯಲು ತೆಗೆದುಕೊಂಡಿರುವ ಕ್ರಮಗಳಿಂದಾಗಿ ತೆರಿಗೆ ಸಂಗ್ರಹವು ಹೆಚ್ಚಾಗುತ್ತಿದೆ ಎಂದು ಸರ್ಕಾರ ಸೋಮವಾರ ತಿಳಿಸಿದೆ.

‘ಮಂದಗತಿಯ ಚಲನೆಯಿಂದ ಆರ್ಥಿಕತೆಯು ಹೊರಬಂದಿದೆ ಎನ್ನುವುದನ್ನು ತೆರಿಗೆ ಸಂಗ್ರಹವು ಸೂಚಿಸುತ್ತಿದೆ. ಹಣದುಬ್ಬರ ಮತ್ತು ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಸಹ ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಕಾರಣವಾಗಿವೆ’ ಎಂದು ಕೆಪಿಎಂಜಿ ಇಂಡಿಯಾದ ಪರೋಕ್ಷ ತೆರಿಗೆ ಪಾಲುದಾರ ಅಭಿಷೇಕ್‌ ಜೈನ್‌ ತಿಳಿಸಿದ್ದಾರೆ.

ವರಮಾನ ಇನ್ನಷ್ಟು ಹೆಚ್ಚಲಿದೆ: ಹಲವು ಉತ್ಪನ್ನಗಳ ಮೇಲಿನ ತೆರಿಗೆ ದರದಲ್ಲಿ ಪರಿಷ್ಕರಣೆ ಮಾಡಿರುವುದರಿಂದ ವರಮಾನ ಸಂಗ್ರಹವು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್‌ ಚೌಧರಿ ಹೇಳಿದ್ದಾರೆ.

ಪ್ಯಾಕ್‌ ಮಾಡಿರುವ, ಲೇಬಲ್‌ ಇರುವ ಮೊಸರು, ಮಜ್ಜಿಗೆ, ಬೆಲ್ಲ, ಮಂಡಕ್ಕಿ ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ಜುಲೈ 18ರಿಂದ ಶೇಕಡ 5ರಷ್ಟು ತೆರಿಗೆ ವಿಧಿಸಲಾಗಿದೆ. ದಿನಕ್ಕೆ ₹ 1,000 ಕ್ಕಿಂತ ಹೆಚ್ಚಿನ ಬಾಡಿಗೆಯ ಹೋಟೆಲ್‌ ಕೊಠಡಿಗೆ, ನಕಾಶೆ, ಚಾರ್ಟ್‌, ಅಟ್ಲಾಸ್‌ಗೆ ಶೇ 12ರಷ್ಟು ತೆರಿಗೆ ವಿಧಿಸಲಾಗಿದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಎಸ್‌ಟಿ ಸಂಗ್ರಹ ಶೇ 36.4ರಷ್ಟು ಬೆಳವಣಿಗೆ ಕಂಡಿದೆ ಎಂದು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.