ನವದೆಹಲಿ: ಒಟ್ಟು ಜಿಎಸ್‌ಟಿ ಸಂಗ್ರಹವು ಶೇ 9.1ಕ್ಕೆ ಹೆಚ್ಚಳವಾಗಿದ್ದು, ಫೆಬ್ರುವರಿಯಲ್ಲಿ ₹1.84 ಲಕ್ಷ ಕೋಟಿ ಸಂಗ್ರಹವಾಗಿದೆ. ಇದರಿಂದ ದೇಶೀಯ ಬಳಕೆ ಹೆಚ್ಚಳವಾಗಿದ್ದು, ಆರ್ಥಿಕ ಪುನಶ್ಚೇತನದ ಮುನ್ಸೂಚನೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಜಿಎಸ್‌ಟಿ ಸಮಿತಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ‘ಕೇಂದ್ರ ಜಿಎಸ್‌ಟಿ ₹35,204 ಕೋಟಿಗೆ ಹೆಚ್ಚಳವಾಗಿದೆ. ರಾಜ್ಯ ಜಿಎಸ್‌ಟಿ ₹43,704 ಕೋಟಿಗೆ ಏರಿಕೆಯಾಗಿದೆ. ಒಟ್ಟು ₹90,870 ಕೋಟಿ ಜಿಎಸ್‌ಟಿ ಸಂಗ್ರಹವಾಗಿದ್ದು, ಸೆಸ್ ರೂಪದಲ್ಲಿ ₹13,868 ಕೋಟಿ ಸಂಗ್ರಹವಾಗಿದೆ ಎಂದೆನ್ನಲಾಗಿದೆ.
‘ದೇಶೀಯ ವಹಿವಾಟಿನಲ್ಲಿ ಜಿಎಸ್‌ಟಿ ಆದಾಯವು ಶೇ 10.2ರಷ್ಟು ಹೆಚ್ಚಳವಾಗಿದ್ದು, ಇದರಿಂದ ₹1.42 ಲಕ್ಷ ಕೋಟಿ ಸಂಗ್ರಹವಾಗಿದೆ. ಆಮದು ಪ್ರಮಾಣವೂ ಶೇ 5.4ರಷ್ಟು ಹೆಚ್ಚಳವಾಗಿದ್ದು, ₹41,702 ಕೋಟಿ ಮೊತ್ತ ಫೆಬ್ರುವರಿಯಲ್ಲಿ ಸಂಗ್ರಹವಾಗಿದೆ’ ಎಂದು ಹೇಳಲಾಗಿದೆ.
‘ಮರುಪಾವತಿಯು ಫೆಬ್ರುವರಿಯಲ್ಲಿ ₹20,889 ಕೋಟಿಯಷ್ಟಿದ್ದು, ಇದು 2024ರ ಫೆಬ್ರುವರಿಗೆ ಹೋಲಿಸಿದರೆ ಶೇ 17.3ರಷ್ಟು ಹೆಚ್ಚಳವಾಗಿದೆ. 2025ರ ಒಟ್ಟು ಜಿಎಸ್‌ಟಿ ಸಂಗ್ರಹವು ಶೇ 8.1ರ ಬೆಳವಣಿಗೆ ದರದಲ್ಲಿ ₹1.63 ಲಕ್ಷ ಕೋಟಿ ಸಂಗ್ರಹವಾಗಿದೆ. ಇದರಿಂದ ಒಟ್ಟು ಹಾಗೂ ನಿವ್ವಳ ಜಿಎಸ್‌ಟಿ ಆದಾಯವು 2024ರ ಫೆಬ್ರುವರಿಯಲ್ಲಿ ಕ್ರಮವಾಗಿ ₹1.68 ಲಕ್ಷ ಕೋಟಿ ಹಾಗೂ ₹1.50 ಲಕ್ಷ ಕೋಟಿ ಇತ್ತು. 2025ರ ಫೆಬ್ರುವರಿಯಲ್ಲಿ ಇದು ₹1.84ಲಕ್ಷ ಕೋಟಿಯಷ್ಟು ಸಂಗ್ರಹವಾಗಿದೆ. ಆದರೆ ಜನವರಿಗೆ (₹1.96ಲಕ್ಷ ಕೋಟಿ) ಹೋಲಿಸಿದಲ್ಲಿ ತುಸು ಕಡಿಮೆಯಾಗಿದೆ.
ಡೆಲಾಯ್ಟ್ ಇಂಡಿಯಾ ಪಾಲುದಾರ ಕಂಪನಿಯ ಎಂ.ಎಸ್. ಮಣಿ ಅವರು ಈ ಕುರಿತು ಪ್ರತಿಕ್ರಿಯಿಸಿ, ‘ಹರಿಯಾಣ, ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ ಹಾಗೂ ಕರ್ನಾಟಕದಲ್ಲಿ ಜಿಎಸ್‌ಟಿ ಸಂಗ್ರಹ ಶೇ 10ರಿಂದ 20ರಷ್ಟು ಹೆಚ್ಚಳವಾಗಿದೆ. ತೆಲಂಗಾಣ, ಗುಜರಾತ್, ಅಸ್ಸಾಂ, ಆಂಧ್ರಪ್ರದೇಶ, ಒಡಿಶಾದಲ್ಲಿ ಜಿಎಸ್‌ಟಿ ಸಂಗ್ರಹ ಶೇ 1ರಿಂದ 4ರಷ್ಟು ಕುಸಿತ ಕಂಡಿದೆ’ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.