ಸಾಲ (ಸಾಂದರ್ಭಿಕ ಚಿತ್ರ)
–ಗೆಟ್ಟಿ ಚಿತ್ರ
ಮುಂಬೈ: ಜಿಎಸ್‌ಟಿ ದರ ಪರಿಷ್ಕರಣೆಯ ನಂತರದಲ್ಲಿ ದೇಶದಲ್ಲಿ ಜನರಿಂದ ಸಾಲಕ್ಕೆ ಕೋರಿಕೆ ಬರುತ್ತಿರುವುದು ಹೆಚ್ಚಾಗಿದೆ ಎಂದು ಟ್ರಾನ್ಸ್‌ಯೂನಿಯನ್ ಸಿಬಿಲ್ ಕಂಪನಿ ಹೇಳಿದೆ. ಯುವ ವರ್ಗದವರು ಸಾಲ ಪಡೆಯುವಲ್ಲಿ ಹೆಚ್ಚಿನ ಮಟ್ಟದ ಎಚ್ಚರಿಕೆ ತೋರುತ್ತಿದ್ದಾರೆ ಎಂದು ಅದು ಹೇಳಿದೆ.
ಆಸ್ತಿಯನ್ನು ಅಡಮಾನವನ್ನಾಗಿ ಇರಿಸಿ ಪಡೆದ ಸಣ್ಣ ಸಾಲ ಹಾಗೂ ದ್ವಿಚಕ್ರ ವಾಹನ ಸಾಲಗಳ ಮರುಪಾವತಿ ಆಗದೆ ಇರುವ ಪ್ರಮಾಣವು ಸೆಪ್ಟೆಂಬರ್ ನಂತರದಲ್ಲಿ ಹೆಚ್ಚಾಗಿದೆ ಎಂದು ತಿಳಿಸಿದೆ.
‘ಜನರು ವಾಹನ ಖರೀದಿಸಲು ಹಾಗೂ ಗ್ರಾಹಕ ಬಳಕೆ ಉತ್ಪನ್ನಗಳನ್ನು ಖರೀದಿಸಲು ಸಾಲಕ್ಕೆ ಕೋರಿಕೆ ಸಲ್ಲಿಸುತ್ತಿರುವುದು ಜಿಎಸ್‌ಟಿ ದರ ಪರಿಷ್ಕರಣೆಯ ನಂತರದಲ್ಲಿ ಹೆಚ್ಚಾಗಿದೆ’ ಎಂದು ಕಂಪನಿಯ ವರದಿಯು ಹೇಳಿದೆ.
ಸಾಲಕ್ಕೆ ಕೋರಿಕೆ ಸಲ್ಲಿಸುತ್ತಿರುವವರ ಪೈಕಿ 26–35 ವರ್ಷ ವಯಸ್ಸಿನ ನಡುವಿನವರ ಪ್ರಮಾಣವು ಹಿಂದಿನ ಎರಡು ಹಣಕಾಸು ವರ್ಷಗಳ ಎರಡನೆಯ ತ್ರೈಮಾಸಿಕದಲ್ಲಿ ಶೇ 40ರಷ್ಟು ಇದ್ದಿದ್ದು, ಈ ಬಾರಿ ಶೇ 38ಕ್ಕೆ ಇಳಿಕೆಯಾಗಿದೆ.
25 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಕೂಡ ಸಾಲಕ್ಕೆ ಕೋರಿಕೆ ಸಲ್ಲಿಸುವುದುಕಡಿಮೆ ಆಗಿದೆ. ಹಿಂದಿನ ವರ್ಷದ ಎರಡನೆಯ ತ್ರೈಮಾಸಿಕದಲ್ಲಿ ಈ ವರ್ಗದವರಿಂದ ಬಂದ ಕೋರಿಕೆ ಪ್ರಮಾಣ ಶೇ 20ರಷ್ಟು ಇತ್ತು. ಈ ಬಾರಿ ಅದು ಶೇ 19ಕ್ಕೆ ಇಳಿದಿದೆ.
ಆದರೆ 36–55 ವರ್ಷ ವಯಸ್ಸಿನವರು ಸಾಲಕ್ಕೆ ಕೋರಿಕೆ ಸಲ್ಲಿಸುವ ಪ್ರಮಾಣವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಹೆಚ್ಚಳ ಕಂಡಿದೆ.
‘ಜಿಎಸ್‌ಟಿ ದರ ಪರಿಷ್ಕರಣೆಯು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲು ಬಹಳ ಅಗತ್ಯವಾಗಿದ್ದ ಕ್ರಮ. ಈ ಕ್ರಮದ ಧನಾತ್ಮಕ ಪರಿಣಾಮಗಳು ಗ್ರಾಹಕರ ವಿಶ್ವಾಸದಲ್ಲಿ ಕಂಡುಬಂದಿರುವ ಸುಧಾರಣೆ ಹಾಗೂ ಸಾಲಕ್ಕೆ ಬಂದಿರುವ ಹೆಚ್ಚಿನ ಬೇಡಿಕೆಯ ರೂಪದಲ್ಲಿ ಕಾಣಿಸುತ್ತಿವೆ’ ಎಂದು ಟ್ರಾನ್ಸ್‌ಯೂನಿಯನ್ ಸಿಬಿಲ್ ಕಂಪನಿಯ ಸಿಇಒ ಭವೇಶ್ ಜೈನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.