ADVERTISEMENT

ಲಾಕ್‌ಡೌನ್‌: ಅಕ್ರಮವಾಗಿ ಪಾನ್‌ ಮಸಾಲಾ, ತಂಬಾಕು ಮಾರಾಟ ಜಾಲ ಪತ್ತೆ

₹ 225 ಕೋಟಿ ಮೊತ್ತದ ಜಿಎಸ್‌ಟಿ ವಂಚನೆ ಪತ್ತೆ

ಪಿಟಿಐ
Published 13 ಜೂನ್ 2020, 11:17 IST
Last Updated 13 ಜೂನ್ 2020, 11:17 IST
ತಂಬಾಕು ಸೇವನೆ (ಸಾಂದರ್ಭಿಕ ಚಿತ್ರ)
ತಂಬಾಕು ಸೇವನೆ (ಸಾಂದರ್ಭಿಕ ಚಿತ್ರ)   

ಭೋಪಾಲ್‌: ಲಾಕ್‌ಡೌನ್ ಅವಧಿಯಲ್ಲಿ ಅಕ್ರಮವಾಗಿ ಪಾನ್‌ ಮಸಾಲಾ ಮತ್ತು ತಂಬಾಕು ಮಾರಾಟ ಮಾಡಿ ₹ 225 ಕೋಟಿ ಮೊತ್ತದ ಜಿಎಸ್‌ಟಿ ವಂಚನೆ ಎಸಗಿರುವ ಜಾಲವನ್ನುಕೇಂದ್ರ ಜಿಎಸ್‌ಟಿ ತನಿಖಾ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಇಂದೋರ್‌ನಲ್ಲಿ ಅಕ್ರಮವಾಗಿ ಪಾನ್‌ ಮಸಾಲಾ ತಯಾರಿಕಾ ಘಟಕ ನಡೆಸುತ್ತಿದ್ದ ಪ್ರಕರಣವನ್ನು ಬೇಧಿಸಿದ ಅಧಿಕಾರಿಗಳು ಮೂವರನ್ನು ಬಂಧಿಸಿದ್ದಾರೆ.

ಕೋವಿಡ್‌–19 ಹರಡು ಸಾಧ್ಯತೆ ಇರುವುದರಿಂದ ದೇಶದಾದ್ಯಂತ ಪಾನ್‌ ಮಸಾಲಾ ಮತ್ತು ತಂಬಾಕು ಮಾರಾಟ ಮತ್ತು ವಿತರಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ‍ರಿಸ್ಥಿತಿಯ ದುರ್ಬಳಕೆ ಮಾಡಿಕೊಂಡಿರುವ ಆರೋಪಿಗಳು, ಅಕ್ರಮವಾಗಿ ತಯಾರಿಕೆ ನಡೆಸಿ,ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಮಾರುಕಟ್ಟೆ ದರಕ್ಕಿಂತ 4ರಿಂದ 5 ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಜಿಎಸ್‌ಟಿ ತನಿಖಾ ವಿಭಾಗದ ಮಹಾ ನಿರ್ದೇಶನಾಲಯ (ಡಿಜಿಜಿಐ) ಹಾಗೂ ರೆವಿನ್ಯೂ ಇಲಾಖೆಯ ತನಿಖಾ ಅಧಿಕಾರಿಗಳು (ಡಿಆರ್‌ಐ) ಜಂಟಿಯಾಗಿ ಇಂದೋರ್‌ ಮತ್ತು ಉಜ್ಜಯಿನಿಯಲ್ಲಿ ಅಕ್ರಮ ಮತ್ತು ಅನಧಿಕೃತ ಗೋದಾಮುಗಳ ಮೇಲೆ ಗುರುವಾರ ಮತ್ತು ಶುಕ್ರವಾರ 16 ಕಡೆ ದಾಳಿ ನಡೆಸಿದ್ದರು.

ಡಿಜಿಜಿಐ ನಡೆಸಿರುವ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಗಳು ಮತ್ತು ಅವರ ಪಾಲುದಾರರು 2019ರ ಜುಲೈನಿಂದ 2020ರ ಮಾರ್ಚ್‌ ಅವಧಿಯಲ್ಲಿ ಅಕ್ರಮವಾಇಗ ಸರಕುಗಳನ್ನು ಮಾರಾಟ ಮಾಡುವ ಮೂಲಕ ₹ 225 ಕೋಟಿ ಮೊತ್ತದ ತೆರಿಗೆ ವಂಚನೆ ಎಸಗಿದ್ದಾರೆ. ಇದರ ಒಟ್ಟಾರೆ ತೆರಿಗೆ ಮೊತ್ತವು ₹ 400 ಕೋಟಿ ಆಗುವ ಸಾಧ್ಯತೆ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಿಯಲ್‌ ಎಸ್ಟೇಟ್‌, ಆದರಾತಿಥ್ಯ ಮತ್ತು ಮಾಧ್ಯಮ ವಲಯದಲ್ಲಿ ಎಂಟು ಕಂಪನಿಗಳನ್ನು ಸೃಷ್ಟಿಸಿ, ಅಕ್ರಮ ಎಸಗಿದ್ದಾರೆ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ.

ಆರೋಪಿಗಳು ತಮ್ಮ ಅಕ್ರಮ ವಹಿವಾಟಿಗೆ 70ಕ್ಕೂ ಅಧಿಕ ಕಾರ್ಗೊ ಟ್ರಕ್‌ಗಳನ್ನು ಬಳಸಿರುವುದಾಗಿ ತಿಳಿದುಬಂದಿದೆ. ಅಕ್ರಮ ಸರಕುಗಳನ್ನು ಸಾಗಿಸಲು ಈ ಟ್ರಕ್‌ಗಳ ಮೇಲೆ 'On Press Duty’ ಎಂದು ಅಂಟಿಸಿಕೊಂಡು ಮಧ್ಯಪ್ರದೇಶ ಮತ್ತು ನೆರೆಯ ರಾಜ್ಯಗಳಲ್ಲಿ ಸಂಚರಿಸಿದ್ದಾರೆ. ಟ್ರಕ್ ಚಾಲಕರು ಇಂಡೋರ್‌ನ ಸ್ಥಳೀಯ ಪತ್ರಿಕೆಯೊಂದರ ಗುರುತಿನ ಕಾರ್ಡ್‌ ಅನ್ನೂ ಹೊಂದಿದ್ದರು.

ಇಂದೋರ್, ಉಜ್ಜಯಿನಿ, ಜಬಲ್‌ಪುರ‌ ಮತ್ತು ಭೋಪಾಲ್‌ನಲ್ಲಿ ನಡೆಸಿರುವ ಜಂಟಿ ಕಾರ್ಯಾಚರಣೆ ವೇಳೆ ಭಾರಿ ಪ್ರಮಾಣದಲ್ಲಿ ಪಾನ್‌ ಮಸಾಲಾ, ತಂಬಾಕು, ಸಂಬಂಧಿಸಿದ ಕಚ್ಚಾ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಜಿಜಿಐನ ಹೆಚ್ಚುವರಿ ಪ್ರಧಾನ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.