ADVERTISEMENT

ಪಾಕಿಸ್ತಾನದಲ್ಲಿ ಬಡತನ ಹೆಚ್ಚಾಗಲು 'ಜಿಎಸ್‌ಟಿ' ಕಾರಣ: ವಿಶ್ವ ಬ್ಯಾಂಕ್ ವರದಿ

ಪಿಟಿಐ
Published 25 ಮೇ 2025, 11:08 IST
Last Updated 25 ಮೇ 2025, 11:08 IST
   

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಬಡತನ ಹೆಚ್ಚಾಗಲು ಅಲ್ಲಿನ ಸರಕು ಮತ್ತು ಸೇವಾ ತೆರಿಗೆಯೂ(ಜಿಎಸ್‌ಟಿ) ಒಂದು ಪ್ರಮುಖ ಕಾರಣವಾಗಿದೆ ಎಂದು ವಿಶ್ವ ಬ್ಯಾಂಕ್ ಬಹಿರಂಗಪಡಿಸಿದೆ‌.

ಭಾನುವಾರ ವಿಶ್ವ ಬ್ಯಾಂಕ್ ಬಿಡುಗಡೆಗೊಳಿಸಿದ 'ಪಾಕಿಸ್ತಾನದಲ್ಲಿನ ಅಸಮಾನತೆ ಮತ್ತು ಬಡತನದ ಮೇಲೆ ತೆರಿಗೆಯ ಪರಿಣಾಮಗಳು' ಎಂಬ ಅಧ್ಯಯನದಲ್ಲಿ ಈ ಮಾಹಿತಿಯಿದೆ‌.

ಪಾಕಿಸ್ತಾನದಲ್ಲಿ ಜಿಎಸ್‌ಟಿ ಪಾವತಿಯ ವೆಚ್ಚವು ಶೇ.7ಕ್ಕಿಂತ ಅಧಿಕ ತೆರಿಗೆದಾರ ಕುಟುಂಬಗಳ ತೆರಿಗೆ ಪೂರ್ವ ವೆಚ್ಚವನ್ನು ಮೀರಿಸುವುದರಿಂದ, ಅಲ್ಲಿನ ಬಡ ಮತ್ತು ನಿರ್ಗತಿಕ ಕುಟುಂಬಗಳಲ್ಲಿ ಮತ್ತಷ್ಟು ಬಡತನ ಹೆಚ್ಚಾಗಲು ಇದು ಕಾರಣವಾಗುತ್ತಿದೆ ಎಂದು ವರದಿಯಲ್ಲಿದೆ.

ADVERTISEMENT

'ಜಿಎಸ್‌ಟಿ' ಹೊರತುಪಡಿಸಿ, ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗಿಸುವ ಹಣವು ಅಸಮಾನತೆಗೆ ಕಾರಣವಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬಡತನ ನಿರ್ಮೂಲನೆಗಾಗಿ ಬಡತನ ರೇಖೆಗಿಂತ ಕೆಳಗಿರುವ ವರಿಗೆ ಪ್ರತಿ ತಿಂಗಳು ಹಣಕಾಸಿನ ನೆರವು ನೀಡುವ 'ಬೆನಜಿರ್ ಹಣಕಾಸು ಸಹಾಯ ಯೋಜನೆ'ಯು(ಬಿಐಎಸ್‌ಪಿ) ಅಲ್ಲಿನ ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ ಎಂದು ತಿಳಿಸಿದೆ‌.

ಪಾಕಿಸ್ತಾನದಲ್ಲಿರುವ ಬಡವರು ಮತ್ತು ಮಧ್ಯಮ ವರ್ಗದ ಜನರು ತಾವು ಪಾವತಿಸುವ ತೆರಿಗೆಗಿಂತ ಕಡಿಮೆ ಪ್ರಮಾಣದ ಪ್ರಯೋಜನಗಳನ್ನು ಸರ್ಕಾರದ ಮೂಲಕ ಪಡೆಯುತ್ತಿದ್ದಾರೆ ಎಂದು ವರದಿಯಲ್ಲಿದೆ.

ಪಾಕಿಸ್ತಾನವು ದೇಶೀಯ ಆದಾಯ ಕ್ರೋಢೀಕರಣ ಮತ್ತು ಸಾರ್ವಜನಿಕ ವೆಚ್ಚದಲ್ಲಿ ದಕ್ಷತೆಯನ್ನು ಕಾಪಾಡಿಕೊಳ್ಳುವ ಮೂಲಕ ಆರ್ಥಿಕ ಅಸಮಾನತೆಯನ್ನು ಕಡಿಮೆಗೊಳಿಸಬಹುದು ಮತ್ತು ಶಿಕ್ಷಣ ಹಾಗೂ ಸಾರ್ವಜನಿಕ ವೈದ್ಯಕೀಯ ಸೇವೆಯನ್ನು ಉತ್ತಮಗೊಳಿಸುವ ಮೂಲಕ ದೀರ್ಘಾವಧಿಯಲ್ಲಿ ಬಡತನ ಮತ್ತು ಅಸಮಾನತೆಯನ್ನು ತಹಬದಿಗೆ ತರಬಹುದು ಎಂದು ವಿಶ್ವ ಬ್ಯಾಂಕ್ ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.