ADVERTISEMENT

ಜಿಎಸ್‌ಟಿಗೆ ನಾಲ್ಕು ವರ್ಷ: 66 ಕೋಟಿಗೂ ಹೆಚ್ಚು ರಿಟರ್ನ್ಸ್‌ ಸಲ್ಲಿಕೆ

ಪಿಟಿಐ
Published 30 ಜೂನ್ 2021, 14:58 IST
Last Updated 30 ಜೂನ್ 2021, 14:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೆ ಬಂದು ನಾಲ್ಕು ವರ್ಷಗಳು ಪೂರ್ಣಗೊಂಡಿದ್ದು, ಇದುವರೆಗೆ 66 ಕೋಟಿಗೂ ಅಧಿಕ ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಕೆಯಾಗಿವೆ. ಕಡಿಮೆ ತೆರಿಗೆ ದರದಿಂದಾಗಿ ರಿಟರ್ನ್ಸ್ ಸಲ್ಲಿಕೆ ಹೆಚ್ಚಳವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಈ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿರುವ ಸಚಿವಾಲಯವು, ಜಿಎಸ್‌ಟಿಯು ಎಲ್ಲಾ ತೆರಿಗೆ ಪಾವತಿದಾರರಿಗೂ ಸರಳೀಕೃತ ರಿಟರ್ನ್ಸ್‌ ವ್ಯವಸ್ಥೆಯನ್ನು ಕಲ್ಪಿಸಿದೆ. ಕೋವಿಡ್‌–19 ಸಾಂಕ್ರಾಮಿಕವನ್ನು ಗಮನದಲ್ಲಿ ಇಟ್ಟುಕೊಂಡು ಜಿಎಸ್‌ಟಿ ಮಂಡಳಿಯು ವ್ಯಾಪಾರ ವಹಿವಾಟಿಗೆ ಪ್ರಯೋಜನ ಆಗುವಂತಹ ಹಲವು ಸ್ಪಷ್ಟೀಕರಣಗಳನ್ನು ಸಹ ಶಿಫಾರಸು ಮಾಡಿದೆ ಎಂದು ಹೇಳಿದೆ.

ವಾರ್ಷಿಕ ₹ 20 ಲಕ್ಷದವರೆಗಿನ ವಹಿವಾಟು ನಡೆಸುವ ಉದ್ದಿಮೆಗಳಿಗೆ ಜಿಎಸ್‌ಟಿ ವಿನಾಯಿತಿ ನೀಡಲಾಗಿದೆ. ವಾರ್ಷಿಕ ₹ 50 ಲಕ್ಷದವರೆಗಿನ ವಹಿವಾಟುದಾರರು ಕಂಪೊಸಿಷನ್‌ ಸ್ಕೀಮ್ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದ್ದು, ಶೇಕಡ 6ರಷ್ಟು ತೆರಿಗೆ ಪಾವತಿಸಬಹುದಾಗಿದೆ.

ADVERTISEMENT

ಜಿಎಸ್‌ಟಿ ವ್ಯವಸ್ಥೆಯು ಗ್ರಾಹಕ ಮತ್ತು ತೆರಿಗೆ ಪಾವತಿದಾರ ಸ್ನೇಹಿಯಾಗಿದೆ ಎಂದು ಈಗ ವ್ಯಾಪಕವಾಗಿ ಒಪ್ಪಿಕೊಳ್ಳಲಾಗಿದೆ. ಜಿಎಸ್‌ಟಿಗೂ ಮುಂಚೆ ಹೆಚ್ಚಿನ ತೆರಿಗೆ ದರಗಳು ತೆರಿಗೆ ಪಾವತಿಸಲು ತೊಡಕಾಗಿದ್ದವು. ಈವರೆಗೆ 66 ಕೋಟಿಗೂ ಹೆಚ್ಚು ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆಯಾಗಿದೆ ಎಂದು ಸಚಿವಾಲಯವು ಟ್ವೀಟ್‌ ಮಾಡಿದೆ.

ಜಿಎಸ್‌ಟಿ ಅಡಿಯಲ್ಲಿ ನಾಲ್ಕು ಹಂತದ ತೆರಿಗೆ ದರಗಳು ಇವೆ. ಅಗತ್ಯ ವಸ್ತುಗಳ ಮೇಲೆ ಶೂನ್ಯ ಅಥವಾ ಅತಿ ಕಡಿಮೆ (ಶೇ 5) ತೆರಿಗೆ ದರ ಹಾಗೂ ಕಾರಿನ ಮೇಲೆ ಶೇ 28ರಷ್ಟು ಗರಿಷ್ಠ ತೆರಿಗೆ ದರ ವಿಧಿಸಲಾಗುತ್ತಿದೆ. ಇನ್ನುಳಿದಂತೆ ಶೇ 12 ಮತ್ತು ಶೇ 18ರ ತೆರಿಗೆ ದರಗಳಿವೆ. ಜಿಎಸ್‌ಟಿಗೂ ಮುಂಚಿನ ವ್ಯವಸ್ಥೆಯಲ್ಲಿ ವ್ಯಾಟ್‌, ಎಕ್ಸೈಸ್‌, ಸಿಎಸ್‌ಟಿ ಮತ್ತು ಇತರೆ ತೆರಿಗೆಗಳು ಸೇರಿಕೊಂಡು ಒಟ್ಟಾರೆ ಶೇ 31ರಷ್ಟು ತೆರಿಗೆಯನ್ನು ಗ್ರಾಹಕ ಪಾವತಿಸಬೇಕಾಗಿತ್ತು ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.