ವಿಶಾಖಪಟ್ಟಣ : ಜಿಎಸ್‌ಟಿ ದರಗಳನ್ನು ಪರಿಷ್ಕರಿಸಿ ಜಾರಿಗೆ ತಂದಿರುವ ಸುಧಾರಣೆಯು ದೇಶದ ಅರ್ಥ ವ್ಯವಸ್ಥೆಗೆ ₹2 ಲಕ್ಷ ಕೋಟಿ ಹಣ ಸಿಗುವಂತೆ ಮಾಡಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ತೆರಿಗೆ ರೂಪದಲ್ಲಿ ಪಾವತಿ ಆಗಬಹುದಾಗಿದ್ದ ಹಣವು ಜನರ ಕೈಯಲ್ಲಿ ಉಳಿಯಲಿದೆ ಎಂದು ಅವರು ಇಲ್ಲಿ ಹೇಳಿದ್ದಾರೆ.
ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ತೆರಿಗೆ ಸುಧಾರಣೆಗಳು ಜಾರಿಗೆ ಬಂದ ನಂತರದಲ್ಲಿ ಶೇ 12ರಷ್ಟು ತೆರಿಗೆ ಹಂತದಲ್ಲಿ ಇದ್ದ ಶೇ 99ರಷ್ಟು ಉತ್ಪನ್ನಗಳು ಶೇ 5ರ ಹಂತಕ್ಕೆ ಬರುತ್ತವೆ ಎಂದಿದ್ದಾರೆ. ಅಲ್ಲದೆ, ಶೇ 28ರಷ್ಟು ತೆರಿಗೆಯ ಹಂತದಲ್ಲಿ ಇದ್ದ ಶೇ 90ರಷ್ಟು ವಸ್ತುಗಳು ಶೇ 18ರಷ್ಟು ತೆರಿಗೆಯ ಹಂತಕ್ಕೆ ಬರುತ್ತವೆ ಎಂದು ನಿರ್ಮಲಾ ಹೇಳಿದ್ದಾರೆ.
ಎಫ್‌ಎಂಸಿಜಿ ವಲಯದ ಕೆಲವು ಬೃಹತ್ ಕಂಪನಿಗಳು ಸೇರಿದಂತೆ ಹಲವಾರು ಕಂಪನಿಗಳು ದರ ಇಳಿಕೆಯ ಪ್ರಯೋಜನವನ್ನು ಗ್ರಾಹಕರಿಗೆ ಸೆಪ್ಟೆಂಬರ್ 22ಕ್ಕೂ (ಜಿಎಸ್‌ಟಿ ದರ ಪರಿಷ್ಕರಣೆ ಜಾರಿಗೆ ಬರುವ ದಿನ) ಮೊದಲೇ ವರ್ಗಾವಣೆ ಮಾಡಲು ಮುಂದೆ ಬಂದಿವೆ ಎಂದು ತಿಳಿಸಿದ್ದಾರೆ.
‘ಹೊಸ ತೆರಿಗೆ ಹಂತಗಳಿಂದಾಗಿ ಅರ್ಥ ವ್ಯವಸ್ಥೆಗೆ ₹2 ಲಕ್ಷ ಕೋಟಿಯಷ್ಟು ಹಣವನ್ನು ನೀಡಿದಂತೆ ಆಗುತ್ತದೆ’ ಎಂದು ಅವರು ಅಂದಾಜು ಮಾಡಿದ್ದಾರೆ.
2017–18ನೇ ಹಣಕಾಸು ವರ್ಷದಲ್ಲಿ ₹7.19 ಲಕ್ಷ ಕೋಟಿ ಆಗಿದ್ದ ಜಿಎಸ್‌ಟಿ ವರಮಾನವು 2025ರಲ್ಲಿ ₹22.08 ಲಕ್ಷ ಕೋಟಿಗೆ ಹೆಚ್ಚಳ ಕಂಡಿದೆ. ಜಿಎಸ್‌ಟಿ ಮಂಡಳಿಯು ಸಹಕಾರ ಒಕ್ಕೂಟ ವ್ಯವಸ್ಥೆಗೆ ಒಳ್ಳೆಯ ಉದಾಹರಣೆ. ಸ್ವಾತಂತ್ರ್ಯ ಬಂದ ನಂತರದಲ್ಲಿ ರಚನೆಯಾದ ಸಾಂವಿಧಾನಿಕ ಸಂಸ್ಥೆ ಇದೊಂದೇ ಎಂದಿದ್ದಾರೆ.
₹3.6 ಲಕ್ಷ ಕೋಟಿ ಸಾಲ
50 ವರ್ಷಗಳ ಬಡ್ಡಿ ರಹಿತ ಹಣಕಾಸಿನ ನೆರವು ಯೋಜನೆಯ ಅಡಿಯಲ್ಲಿ 22 ರಾಜ್ಯಗಳಿಗೆ ಕಳೆದ ನಾಲ್ಕು ವರ್ಷಗಳಲ್ಲಿ ₹3.6 ಲಕ್ಷ ಕೋಟಿ ಸಾಲ ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ‘22 ರಾಜ್ಯಗಳು ಇದನ್ನು ಬಳಸಿಕೊಂಡು ಬಂಡವಾಳ ವೆಚ್ಚದಲ್ಲಿ ಶೇ 10ಕ್ಕಿಂತ ಹೆಚ್ಚು ಏರಿಕೆ ತೋರಿಸಿವೆ’ ಎಂದು ನಿರ್ಮಲಾ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.