ADVERTISEMENT

ಜಿಎಸ್‌ಟಿ ಸುಧಾರಣೆ: ವರಮಾನ ನಷ್ಟ ₹85 ಸಾವಿರ ಕೋಟಿ

‘ತೆರಿಗೆ ಹಂತದಲ್ಲಿನ ಬದಲಾವಣೆಯಿಂದಾಗಿ ₹1.98 ಲಕ್ಷ ಕೋಟಿ ಮೌಲ್ಯದ ಬೇಡಿಕೆ ಸೃಷ್ಟಿ’

ಪಿಟಿಐ
Published 19 ಆಗಸ್ಟ್ 2025, 16:17 IST
Last Updated 19 ಆಗಸ್ಟ್ 2025, 16:17 IST
   

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿ ತರಲು ಉದ್ದೇಶಿಸಿರುವ ಸುಧಾರಣೆಗಳಿಂದಾಗಿ ಸರ್ಕಾರಗಳಿಗೆ ವಾರ್ಷಿಕ ₹85 ಸಾವಿರ ಕೋಟಿ ವರಮಾನ ನಷ್ಟ ಆಗಲಿದೆ ಎಂದು ಎಸ್‌ಬಿಐ ರಿಸರ್ಚ್‌ ಅಂದಾಜು ಮಾಡಿದೆ.

ಆದರೆ ಈ ಸುಧಾರಣೆಗಳ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ₹1.98 ಲಕ್ಷ ಕೋಟಿ ಮೌಲ್ಯದ ಬೇಡಿಕೆಯು ಹೊಸದಾಗಿ ಸೃಷ್ಟಿ ಆಗಲಿದೆ ಎಂದು ಅದು ಅಂದಾಜಿನಲ್ಲಿ ಹೇಳಿದೆ.

ಕೇಂದ್ರ ಸರ್ಕಾರವು ಪ್ರಸ್ತಾವ ಮಾಡಿರುವ ‘ಹೊಸ ತಲೆಮಾರಿನ ಜಿಎಸ್‌ಟಿ’ ವ್ಯವಸ್ಥೆಯು ಎರಡು ಹಂತಗಳ ತೆರಿಗೆಗಳನ್ನು ಮಾತ್ರ ಉಳಿಸಿಕೊಳ್ಳಲಿದೆ. ಶೇ 12 ಹಾಗೂ ಶೇ 28ರ ತೆರಿಗೆ ಹಂತಗಳು ಇನ್ನಿಲ್ಲವಾಗಲಿದ್ದು, ಶೇ 5 ಹಾಗೂ ಶೇ 18ರ ತೆರಿಗೆ ಹಂತಗಳು ಮಾತ್ರ ಉಳಿಯಲಿವೆ. ತಂಬಾಕಿನಂತಹ ಕೆಲವೇ ಕೆಲವು ಉತ್ಪನ್ನಗಳಿಗೆ ಶೇ 40ರಷ್ಟು ತೆರಿಗೆ ಇರಲಿದೆ.

ADVERTISEMENT

ಜಿಎಸ್‌ಟಿ ಸುಧಾರಣೆಯಿಂದಾಗಿ ಬೇಡಿಕೆಯಲ್ಲಿ ಆಗಲಿರುವ ಹೆಚ್ಚಳವು ದೇಶದ ಜಿಡಿಪಿ ಬೆಳವಣಿಗೆಯು ಶೇ 0.6ರಷ್ಟು ಹೆಚ್ಚುವಂತೆ ಮಾಡಲಿದೆ. ಆದರೆ ಇದು ಹಣದುಬ್ಬರಕ್ಕೆ ಕಾರಣ ಆಗುವುದಿಲ್ಲ. ಏಕೆಂದರೆ ಜನರು ವ್ಯಾಪಕವಾಗಿ ಬಳಕೆ ಮಾಡುವ ಉತ್ಪನ್ನಗಳು, ಸರಕುಗಳ ಮೇಲಿನ ತೆರಿಗೆಯು ಕಡಿಮೆ ಹಂತಕ್ಕೆ ಬರುವ ನಿರೀಕ್ಷೆ ಇದೆ ಎಂದು ಅದು ಹೇಳಿದೆ.

ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ಪ್ರಮಾಣವು ಶೇ 0.20ರಿಂದ ಶೇ 0.25ರವರೆಗೆ ಇಳಿಕೆ ಕಾಣಬಹುದು ಎಂದು ಅಂದಾಜು ಮಾಡಿದೆ.

ಅಗತ್ಯ ವಸ್ತುಗಳಾದ ಆಹಾರ ಮತ್ತು ಬಟ್ಟೆಗೆ ಶೇ 12ರಷ್ಟು ತೆರಿಗೆ ಬದಲು ಶೇ 5ರಷ್ಟು ತೆರಿಗೆ ವಿಧಿಸುವ ಸಾಧ್ಯತೆ ಇರುವ ಕಾರಣ, ಈ ವಸ್ತುಗಳ ಹಣದುಬ್ಬರ ಪ್ರಮಾಣವು ಶೇ 0.1ರಿಂದ ಶೇ 0.15ರಷ್ಟು ಕಡಿಮೆ ಆಗುವ ಸಾಧ್ಯತೆ ಇದೆ.

ಬದಲಾವಣೆ ಪ್ರಸ್ತಾವಗಳು ಈ ವರ್ಷದ ಅಕ್ಟೋಬರ್‌ನಲ್ಲಿ ಜಾರಿಗೆ ಬಂದಲ್ಲಿ, ಈ ಹಣಕಾಸು ವರ್ಷದಲ್ಲಿ ಆಗುವ ವರಮಾನ ನಷ್ಟವು ₹45 ಸಾವಿರ ಕೋಟಿ ಆಗಬಹುದು.

ಈ ವರ್ಷದ ಬಜೆಟ್‌ನಲ್ಲಿ ಘೋಷಿಸಲಾದ ವರಮಾನ ತೆರಿಗೆ ಮಿತಿ ಸಡಿಲಿಕೆ ಕ್ರಮ ಹಾಗೂ ಜಿಎಸ್‌ಟಿ ಸುಧಾರಣೆಯ ಒಟ್ಟು ಪರಿಣಾಮವಾಗಿ, ಅರ್ಥ ವ್ಯವಸ್ಥೆಯಲ್ಲಿ ₹5.31 ಲಕ್ಷ ಕೋಟಿ ಮೌಲ್ಯದ ಬೇಡಿಕೆ ಸೃಷ್ಟಿಯಾಗಲಿದೆ ಎಂದು ಎಸ್‌ಬಿಐ ಅಂದಾಜು ಮಾಡಿದೆ.

ಕೇಂದ್ರದ ಪ್ರಸ್ತಾವವನ್ನು ರಾಜ್ಯಗಳ ಸಚಿವರ ಗುಂಪು ಬುಧವಾರ ಹಾಗೂ ಗುರುವಾರ ಪರಾಮರ್ಶೆಗೆ ಒಳಪಡಿಸಲಿದೆ. ಸಚಿವರ ಗುಂಪು ಈ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದರೆ, ಅದನ್ನು ಜಿಎಸ್‌ಟಿ ಮಂಡಳಿಯ ಮುಂದೆ ಇರಿಸಲಾಗುತ್ತದೆ. ಜಿಎಸ್‌ಟಿ ಮಂಡಳಿಯ ಸಭೆಯು ಮುಂದಿನ ತಿಂಗಳು ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.