ADVERTISEMENT

ಜಿಎಸ್‌ಟಿ ಸಂಗ್ರಹ ಸಾರ್ವಕಾಲಿಕ ದಾಖಲೆ: ₹1.41 ಲಕ್ಷ ಕೋಟಿಗೆ ಏರಿಕೆ

ಪಿಟಿಐ
Published 1 ಮೇ 2021, 10:39 IST
Last Updated 1 ಮೇ 2021, 10:39 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಏಪ್ರಿಲ್‌ನಲ್ಲಿ ₹ 1.41 ಲಕ್ಷ ಕೋಟಿಗಳಷ್ಟಾಗಿದೆ. ಜಿಎಸ್‌ಟಿ ವ್ಯವಸ್ಥೆಯಲ್ಲಿ ಸಂಗ್ರಹವಾಗಿರುವ ಸಾರ್ವಕಾಲಿಕ ಗರಿಷ್ಠ ಮೊತ್ತ ಇದಾಗಿದೆ. ಮಾರ್ಚ್‌ನಲ್ಲಿ ಸಂಗ್ರಹ ಆಗಿದ್ದ ₹ 1.23 ಲಕ್ಷ ಕೋಟಿ ಮೊತ್ತಕ್ಕೆ ಹೋಲಿಸಿದರೆ ಏಪ್ರಿಲ್‌ನಲ್ಲಿ ಶೇ 14ರಷ್ಟು ಹೆಚ್ಚಿಗೆ ಸಂಗ್ರಹ ಆಗಿದೆ.

ಏಪ್ರಿಲ್‌ ತಿಂಗಳ ಗರಿಷ್ಠ ಮಟ್ಟದ ತೆರಿಗೆ ಸಂಗ್ರಹವು ಆರ್ಥಿಕತೆಯು ನಿರಂತರವಾಗಿ ಚೇತರಿಕೆ ಕಂಡುಕೊಳ್ಳುತ್ತಿದೆ ಎನ್ನುವುದರ ಸೂಚನೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

ಜಿಎಸ್‌ಟಿ ವರಮಾನವು ಸತತ ಏಳು ತಿಂಗಳುಗಳಲ್ಲಿ ₹ 1 ಲಕ್ಷ ಕೋಟಿಯನ್ನು ದಾಟಿರುವುದಷ್ಟೇ ಅಲ್ಲದೆ ಏರುಮುಖವಾಗಿಯೂ ಇದೆ. ಈ ಅವಧಿಯಲ್ಲಿ ಆರ್ಥಿಕತೆಯು ನಿರಂತರವಾಗಿ ಚೇತರಿಕೆಯು ಕಾಣುತ್ತಿದೆ ಎನ್ನುವುದರ ಸ್ಪಷ್ಟ ಸೂಚನೆ ಇದಾಗಿದೆ. ನಕಲಿ ಬಿಲ್‌ಗಳ ನಿಯಂತ್ರಣ, ದತ್ತಾಂಶ ವಿಶ್ಲೇಷಣೆ, ತೆರಿಗೆ ಆಡಳಿತವನ್ನು ಪರಿಣಾಮಕಾರಿ ಆಗಿ ಜಾರಿಗೊಳಿಸಿರುವ ಕಾರಣಗಳು ತೆರಿಗೆ ವರಮಾನದಲ್ಲಿ ನಿರಂತರ ಏರಿಕೆಗೆ ಕೊಡುಗೆ ನೀಡಿವೆ ಎಂದು ಸಚಿವಾಲಯವು ತಿಳಿಸಿದೆ.

ADVERTISEMENT

ಏಪ್ರಿಲ್‌ನಲ್ಲಿ ಸಂಗ್ರಹ ಆಗಿರುವ ಒಟ್ಟಾರೆ ಮೊತ್ತದಲ್ಲಿ ಸಿಜಿಎಸ್ಟಿ ಮೂಲಕ ₹ 27,837 ಕೋಟಿ, ಎಸ್‌ಜಿಎಸ್‌ಟಿ ಮೂಲಕ ₹ 35,621 ಕೋಟಿ, ಐಜಿಎಸ್‌ಟಿ ಮೂಲಕ ₹ 68,481 ಕೋಟಿ ಹಾಗೂ ಸೆಸ್‌ ಮೂಲಕ ₹ 9,445 ಕೋಟಿ ಸಂಗ್ರಹವಾಗಿದೆ.

ಕೋವಿಡ್‌–19 ಸಾಂಕ್ರಾಮಿಕದ ಎರಡನೇ ಅಲೆಯು ದೇಶದ ಹಲವು ಭಾಗಗಳ ಮೇಲೆ ಪರಿಣಾಮ ಬೀರುತ್ತಿದ್ದರೂ, ದೇಶದ ಉದ್ಯಮಗಳು ರಿಟರ್ನ್ ಸಲ್ಲಿಸುವುದಷ್ಟೇ ಅಲ್ಲದೆ, ತಮ್ಮ ಜಿಎಸ್‌ಟಿ ಬಾಕಿಗಳನ್ನು ಸಕಾಲದಲ್ಲಿ ಪಾವತಿ ಮಾಡಿವೆ ಎಂದು ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.