ADVERTISEMENT

ಭಾರತದ ಸರಕುಗಳ ಮೇಲೆ ಶೇ 25ರಷ್ಟು ಸುಂಕ: GDP ಬೆಳವಣಿಗೆ ದರ ಶೇ 0.30ರಷ್ಟು ಇಳಿಕೆ?

ಪಿಟಿಐ
Published 31 ಜುಲೈ 2025, 23:30 IST
Last Updated 31 ಜುಲೈ 2025, 23:30 IST
   

ನವದೆಹಲಿ: ಭಾರತದ ಸರಕುಗಳ ಮೇಲೆ ಅಮೆರಿಕವು ವಿಧಿಸಿರುವ ಶೇಕಡ 25ರಷ್ಟು ಸುಂಕ ಹಾಗೂ ರಷ್ಯಾದಿಂದ ಕಚ್ಚಾತೈಲ ಮತ್ತು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುತ್ತಿರುವುದಕ್ಕೆ ವಿಧಿಸಿರುವ ದಂಡದ ಕಾರಣದಿಂದಾಗಿ ಭಾರತದ ಜಿಡಿಪಿ ಬೆಳವಣಿಗೆಯು ಈ ವರ್ಷದಲ್ಲಿ ಶೇ 0.30ರಷ್ಟು ಕಡಿಮೆ ಆಗಬಹುದು ಎಂದು ಬ್ರಿಟನ್ನಿನ ಬ್ಯಾಂಕಿಂಗ್ ಕಂಪನಿ ಬಾಕ್ಲೇಸ್‌ ಅಂದಾಜು ಮಾಡಿದೆ.

ಭಾರತವು ದೇಶಿ ಬೇಡಿಕೆಯನ್ನು ಹೆಚ್ಚಾಗಿ ನೆಚ್ಚಿಕೊಂಡಿರುವ ಅರ್ಥ ವ್ಯವಸ್ಥೆಯನ್ನು ಹೊಂದಿರುವ ಕಾರಣಕ್ಕೆ ಅಮೆರಿಕದ ಸುಂಕವು ಗಣನೀಯ ಪ್ರಮಾಣದಲ್ಲಿ ಹಾನಿ ಉಂಟುಮಾಡಲಿಕ್ಕಿಲ್ಲ ಎಂದು ಅದು ಹೇಳಿದೆ.

ಭಾರತದ ಅರ್ಥವ್ಯವಸ್ಥೆಯು ಹೆಚ್ಚು ತೆರೆದುಕೊಂಡಿಲ್ಲ. ದೇಶದ ಆಂತರಿಕ ಬೇಡಿಕೆಯೇ ಬೆಳವಣಿಗೆಗೆ ಪ್ರಮುಖ ಆಧಾರ. ಹೀಗಾಗಿ, ಶೇ 25ರಷ್ಟು ಸುಂಕ ವಿಧಿಸುವ ಕ್ರಮವು ಜಿಡಿಪಿ ಬೆಳವಣಿಗೆಯ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಉಂಟುಮಾಡುವ ಸಾಧ್ಯತೆ ಕಾಣುತ್ತಿಲ್ಲ. ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ಮುಂದುವರಿದಿರುವ ಕಾರಣಕ್ಕೆ, ಅಂತಿಮವಾಗಿ ಸುಂಕದ ಪ್ರಮಾಣವು ಶೇ 25ಕ್ಕಿಂತ ಕಡಿಮೆ ಆಗುವ ನಿರೀಕ್ಷೆ ಇದೆ ಎಂದು ಸಂಸ್ಥೆ ಹೇಳಿದೆ.

ADVERTISEMENT

ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನ ಅಂದಾಜಿನ ಪ್ರಕಾರ ಈ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರವು ಶೇ 6.5ರಷ್ಟು ಇರಲಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಅಂದಾಜಿನ ಪ್ರಕಾರ ಇದು ಶೇ 6.4ರಷ್ಟು ಇರಲಿದೆ.

ಬಾಕ್ಲೇಸ್‌ ಅಂದಾಜಿನ ಧಾಟಿಯಲ್ಲೇ ಅಭಿಪ್ರಾಯ ವ್ಯಕ್ತಪಡಿಸಿರುವ ಮೂಡಿಸ್‌ ಅನಾಲಿಟಿಕ್ಸ್‌ನ ಸಹಾಯಕ ಅರ್ಥಶಾಸ್ತ್ರಜ್ಞೆ ಅದಿತಿ ರಾಮನ್ ಅವರು ‘ಭಾರತದ ಅರ್ಥ ವ್ಯವಸ್ಥೆಯು ಬಾಹ್ಯ ವ್ಯಾಪಾರದ ಮೇಲೆ ಬಹಳ ಕಡಿಮೆ ಅವಲಂಬನೆ ಹೊಂದಿದೆ. ಅರ್ಥ ವ್ಯವಸ್ಥೆಯು ದೇಶಿ ಬೇಡಿಕೆಯ ಮೇಲೆ ಹೆಚ್ಚು ಅವಲಂಬಿತವಾಗಿದೆ’ ಎಂದು ಹೇಳಿದ್ದಾರೆ.

‘ಔಷಧ, ಮುತ್ತು ಮತ್ತು ಜವಳಿ ಉದ್ಯಮದ ಮೇಲೆ ಏಟು ಬೀಳುವ ಸಾಧ್ಯತೆ ಇದೆ’ ಎಂದು ಅದಿತಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.