ADVERTISEMENT

ಅದಾನಿ ಸಮೂಹ ಅಲುಗಾಡಿಸಿದ್ದ ಶಾರ್ಟ್ ಸೆಲ್ಲರ್‌ ಕಂಪನಿ ಹಿಂಡನ್‌ಬರ್ಗ್ ಬಾಗಿಲು ಬಂದ್

ಪಿಟಿಐ
Published 16 ಜನವರಿ 2025, 15:34 IST
Last Updated 16 ಜನವರಿ 2025, 15:34 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ವಾಷಿಂಗ್ಟನ್‌/ ನವದೆಹಲಿ: ಅಮೆರಿಕದ ಶಾರ್ಟ್‌ ಸೆಲ್ಲರ್‌ ಕಂಪನಿ ಹಿಂಡನ್‌ಬರ್ಗ್‌ ರಿಸರ್ಚ್‌ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಕಂಪನಿಯ ಅಧ್ಯಕ್ಷ ನಾಥನ್‌ (ನಾಟೆ) ಆ್ಯಂಡರ್‌ಸನ್‌ ಗುರುವಾರ ಈ ಕುರಿತು ಅಧಿಕೃತವಾಗಿ ಪ್ರಕಟಿಸಿದ್ದಾರೆ.

2017ರಲ್ಲಿ 11 ಮಂದಿ ಸಮಾನ ಮನಸ್ಕರಿಂದ ಈ ಕಂಪನಿ ಸ್ಥಾಪನೆಗೊಂಡಿತ್ತು. ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಳ್ಳಲು ನಾಲ್ಕು ದಿನಗಳು ಬಾಕಿ ಇರುವ ಮೊದಲೇ ಕಂಪನಿಯ ಬಾಗಿಲು ಮುಚ್ಚಿದೆ. 

2023ರ ಜನವರಿಯಲ್ಲಿ ಅದಾನಿ ಸಮೂಹದ ವಿರುದ್ಧ ಹಿಂಡನ್‌ಬರ್ಗ್ ಪ್ರಕಟಿಸಿದ ವರದಿಯು ದೇಶದ ಷೇರುಪೇಟೆಯಲ್ಲಿ ತಲ್ಲಣ ಸೃಷ್ಟಿಸಿತ್ತು. ವಾಸ್ತವಿಕ ಬೆಲೆಗಿಂತ ಶೇ 80ರಷ್ಟು ಹೆಚ್ಚು ಕೃತಕ ಬೆಲೆಯಲ್ಲಿ ಅದಾನಿ ಸಮೂಹದ ಷೇರುಗಳು ಮಾರಾಟವಾಗುತ್ತಿವೆ ಎಂದು ಆರೋಪಿಸಿತ್ತು. ಇದನ್ನು ಅದಾನಿ ಸಮೂಹವು ನಿರಾಕರಿಸಿತ್ತು.

ADVERTISEMENT

ಆದರೆ, ಈ ಆರೋಪದಿಂದಾಗಿ ಅದಾನಿ ಕಂಪನಿಗಳ ಷೇರಿನ ಮೌಲ್ಯದಲ್ಲಿ ಭಾರಿ ಇಳಿಕೆಯಾಗಿತ್ತು. ಈ ವರದಿಯು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರಕ್ಕೂ ಕಾರಣವಾಗಿತ್ತು.

ಸ್ಥಗಿತಕ್ಕೆ ಕಾರಣ ಏನು?:

‘ಕಂಪನಿಯ ವಿಸರ್ಜನೆ ಹಿಂದೆ ನಿರ್ದಿಷ್ಟ ಕಾರಣವಿಲ್ಲ. ಯಾವುದೇ ಬೆದರಿಕೆ ಇಲ್ಲ. ಆರೋಗ್ಯ ಹಾಗೂ ವೈಯಕ್ತಿಕ ಸಮಸ್ಯೆಯೂ ಇಲ್ಲ. ಜಗತ್ತಿನಲ್ಲಿ ಹಲವು ವಿಚಾರಗಳು ಮತ್ತು ನನ್ನ ಬಗ್ಗೆ ಕಾಳಜಿ ಹೊಂದಿರುವ ವ್ಯಕ್ತಿಗಳನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ನನ್ನ ಬದುಕಿನಲ್ಲಿ ಹಿಂಡನ್‌ಬರ್ಗ್ ಒಂದು ಅಧ್ಯಾಯವಾಗಿದೆ’ ಎಂದು ನಾಥನ್‌ ಅವರು, ಕಂಪನಿಯ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದ್ದಾರೆ.

‘ಇನ್ನು ಮುಂದೆ ಕುಟುಂಬದ ಸದಸ್ಯರ ಜೊತೆಗೆ ಹೆಚ್ಚು ಸಮಯ ಕಳೆಯಲು ಬಯಸುತ್ತೇನೆ. ಮನಸ್ಸಿಗೆ ಹೆಚ್ಚು ಖುಷಿ ನೀಡುವ ಸಂಗತಿಗಳತ್ತ ಗಮನ ಕೇಂದ್ರೀಕರಿಸುವೆ’ ಎಂದು ಹೇಳಿದ್ದಾರೆ.

‘ವಿಶ್ವದ ಹಲವು ಉದ್ಯಮ ಸಾಮ್ರಾಜ್ಯಗಳು ನಾವು ಪ್ರಕಟಿಸಿದ ವರದಿಯಿಂದ ಬೆಚ್ಚಿಬಿದ್ದಿವೆ. 100ಕ್ಕೂ ಹೆಚ್ಚು ಉದ್ಯಮಿಗಳ ವಿರುದ್ಧ ಆಯಾ ದೇಶಗಳ ಕಾನೂನು ಪರಿ‍ಪಾಲನಾ ಸಂಸ್ಥೆಗಳಿಂದ ಕ್ರಮ ಜರುಗಿಸಲಾಗಿದೆ’ ಎಂದು ಹೇಳಿದ್ದಾರೆ.

ಹಿಂಡನ್‌ಬರ್ಗ್‌ ಯಾವ ರೀತಿಯಲ್ಲಿ ಸಂಶೋಧನಾ ವರದಿ ತಯಾರಿಸುತ್ತಿತ್ತು ಎಂಬ ಬಗ್ಗೆ ಮುಂದಿನ ಆರು ತಿಂಗಳಿನಲ್ಲಿ ವಿಡಿಯೊಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಅಮೆರಿಕದ ನಿಕೋಲಾ, ಲಾರ್ಡ್‌ಸ್ಟೌನ್ ಮೋಟರ್ಸ್ ಕಾರ್ಪೊರೇಷನ್‌, ಕ್ಲೋಬರ್‌ ಹೆಲ್ತ್‌, ಚೀನಾದ ಕಾಂಡಿ, ಕೊಲಂಬಿಯಾದ ಟೆಕ್ನೊಗ್ಲಾಸ್‌ ಕಂ‍ಪನಿ ಸೇರಿ ಹಲವು ಕಂಪನಿಗಳ ಲೆಕ್ಕಪತ್ರ ದೋಷ ಹಾಗೂ ಅಕ್ರಮ ಚಟುವಟಿಕೆಗಳ ಬಗ್ಗೆ ಹಿಂಡನ್‌ಬರ್ಗ್‌ ವರದಿ ಪ್ರಕಟಿಸಿ ಜಾಗತಿಕ ಗಮನ ಸೆಳೆದಿತ್ತು.

ಅದಾನಿ ಕಂಪನಿ ಷೇರು ಮೌಲ್ಯ ಏರಿಕೆ

ಹಿಂಡನ್‌ಬರ್ಗ್‌ ರಿಸರ್ಚ್‌ ಸ್ಥಗಿತಗೊಂಡ ಬೆನ್ನಲ್ಲೇ ಗುರುವಾರ ನಡೆದ ವಹಿವಾಟಿನಲ್ಲಿ ಅದಾನಿ ಸಮೂಹದ ಕಂಪನಿಗಳ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ. ಎನ್‌ಡಿಟಿವಿ ಶೇ 9.15 ಅಂಬುಜಾ ಸಿಮೆಂಟ್ಸ್‌ ಶೇ 3.88 ಅದಾನಿ ಗ್ರೀನ್‌ ಎನರ್ಜಿ ಶೇ 3.35 ಶಾಂಘಿ ಇಂಡಸ್ಟ್ರೀಸ್‌ ಶೇ 3.34 ಅದಾನಿ ಪವರ್‌ ಶೇ 2.45 ಅದಾನಿ ಪೋರ್ಟ್ಸ್‌ ಶೇ 2.03 ಅದಾನಿ ಟೋಟಲ್‌ ಗ್ಯಾಸ್ ಶೇ 1.78 ಅದಾನಿ ಎಂಟರ್‌‍ಪ್ರೈಸಸ್‌ ಶೇ 1.74 ಅದಾನಿ ಗ್ರೀನ್‌ ಸಲ್ಯೂಷನ್ಸ್‌ ಶೇ 1.54 ಹಾಗೂ ಎಸಿಸಿ ಷೇರಿನ ಮೌಲ್ಯದಲ್ಲಿ ಶೇ 0.77ರಷ್ಟು ಏರಿಕೆಯಾಗಿದೆ. ಅದಾನಿ ವಿಲ್ಮರ್‌ ಷೇರಿನ ಮೌಲ್ಯದಲ್ಲಿ ಶೇ 1.19ರಷ್ಟು ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.