ADVERTISEMENT

2024ರಲ್ಲಿ ಜಿಡಿಪಿ ಶೇ 6.8ರಷ್ಟು ಪ್ರಗತಿ: ಐಎಂಎಫ್‌

ಪಿಟಿಐ
Published 16 ಏಪ್ರಿಲ್ 2024, 20:02 IST
Last Updated 16 ಏಪ್ರಿಲ್ 2024, 20:02 IST
   

ವಾಷಿಂಗ್ಟನ್‌: 2024ರ ಭಾರತದ ಆರ್ಥಿಕತೆ ಬೆಳವಣಿಗೆಯನ್ನು (ಜಿಡಿಪಿ) ಪರಿಷ್ಕರಿಸಿರುವ ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್‌), ಶೇ 6.8ರಷ್ಟು ಪ್ರಗತಿ ಕಾಣಲಿದೆ ಎಂದು ಅಂದಾಜಿಸಿದೆ.

ಜನವರಿಯಲ್ಲಿ ಪ್ರಕಟಿಸಿದ್ದ ಮುನ್ನೋಟದಲ್ಲಿ ಜಿಡಿಪಿಯು ಶೇ 6.5ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಹೇಳಿತ್ತು. ಇಡೀ ವಿಶ್ವದಲ್ಲಿಯೇ ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ನೆರೆಯ ಚೀನಾ ಜಿಡಿಪಿಯು ಇದೇ ಅವಧಿಯಲ್ಲಿ ಶೇ 4.6ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ತಿಳಿಸಿದೆ.

‘2025ರಲ್ಲಿ ಭಾರತದ ಜಿಡಿಪಿಯು ಶೇ 6.5ರಷ್ಟು ‍ಪ್ರಗತಿ ಕಾಣಲಿದೆ. ದೇಶೀಯ ಬೇಡಿಕೆಯ ದೃಢತೆ ಹಾಗೂ ದುಡಿಯುವ ವಯಸ್ಸಿನ ಜನಸಂಖ್ಯೆ ಹೆಚ್ಚಳವು  ಆರ್ಥಿಕತೆಯ ಪ್ರಗತಿಗೆ ನೆರವಾಗಲಿದೆ’ ಎಂದು ಮಂಗಳವಾರ ಬಿಡುಗಡೆಯಾಗಿರುವ ವಿಶ್ವ ಆರ್ಥಿಕ ಮುನ್ನೋಟದ ವರದಿ ತಿಳಿಸಿದೆ.

ADVERTISEMENT

ಆದರೆ, ಇದೇ ಅವಧಿಯಲ್ಲಿ ಏಷ್ಯಾದ ಬೆಳವಣಿಗೆಯು ಕುಸಿತ ಕಾಣಲಿದೆ ಎಂದು ವರದಿ ಹೇಳಿದೆ. 2023ರಲ್ಲಿ ಶೇ 5.6ರಷ್ಟಿದ್ದ ಜಿಡಿಪಿಯು, 2024ರಲ್ಲಿ ಶೇ 5.2ಕ್ಕೆ ಕುಸಿಯಲಿದೆ. 2025ರಲ್ಲಿಯೂ ಇದೇ ಸ್ಥಿತಿ ಮುಂದುವರಿಸಲಿದ್ದು, ಶೇ 4.9ಕ್ಕೆ ಇಳಿಕೆಯಾಗಲಿದೆ ಎಂದು ಅಂದಾಜಿಸಿದೆ.

2023ರಲ್ಲಿ ಶೇ 5.2ರಷ್ಟಿದ್ದ ಚೀನಾದ ಜಿಡಿಪಿಯು, 2024ರಲ್ಲಿ ಶೇ 4.6ಕ್ಕೆ ಇಳಿಕೆಯಾಗಲಿದೆ. 2025ರಲ್ಲಿ ಶೇ 4.1ರಷ್ಟು ದಾಖಲಾಗಲಿದೆ ಎಂದು ಅಂದಾಜಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.