
ನವದೆಹಲಿ: ‘ಆದಾಯ ತೆರಿಗೆ ಇಲಾಖೆಯು ‘ಆದಾಯ ತೆರಿಗೆ ಕಾಯ್ದೆ–2025’ರ ಅಡಿಯಲ್ಲಿ ಸರಳೀಕೃತ ಐಟಿಆರ್ ಫಾರ್ಮ್ ಹಾಗೂ ನಿಯಮಗಳ ಜಾರಿ ಕುರಿತು ಜನವರಿಯಲ್ಲಿ ಅಧಿಸೂಚನೆ ಹೊರಡಿಸಲಿದೆ’ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿಯ (ಸಿಬಿಡಿಟಿ) ಅಧ್ಯಕ್ಷ ರವಿ ಅಗರ್ವಾಲ್ ತಿಳಿಸಿದ್ದಾರೆ.
ಭಾರತ ಅಂತರರಾಷ್ಟ್ರೀಯ ವ್ಯಾಪಾರ ಮೇಳ (ಐಐಟಿಎಫ್)ದಲ್ಲಿ ಸೋಮವಾರ ಮಾತನಾಡಿದ ಅವರು,‘ಇದು ಮುಂದಿನ ಆರ್ಥಿಕ ವರ್ಷ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ. ಹೊಸ ಕಾನೂನಿನ ಅಡಿಯಲ್ಲಿ ಐಟಿಆರ್ ರಿಟರ್ನ್ ಫಾರ್ಮ್‌ಗಳನ್ನು ಮತ್ತಷ್ಟು ಸರಳಗೊಳಿಸಲಿದೆ. 1961ರಿಂದ
ಜಾರಿಗೆಯಲ್ಲಿರುವ ಆದಾಯ ತೆರಿಗೆ ಕಾಯ್ದೆಯನ್ನು ಬದಲಾಯಿಸಲಿದೆ’ ಎಂದು ಅವರು ಹೇಳಿದ್ದಾರೆ.
‘ಹೊಸ ಫಾರ್ಮ್ ಹಾಗೂ ವಿನ್ಯಾಸ ರಚನೆಯ ಕುರಿತ ಪ್ರಕ್ರಿಯೆ ನಡೆಯುತ್ತಿದೆ. ಜನವರಿ ವೇಳೆಗೆ ಇದು ತೆರಿಗೆ ಪಾವತಿದಾರರಿಗೆ ಲಭ್ಯವಾಗಲಿದ್ದು, ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸಾಕಷ್ಟು ಸಮಯವೂ ದೊರಕಲಿದೆ’ ಎಂದು ಅವರು ಮಾಹಿತಿ
ನೀಡಿದ್ದಾರೆ.
ಆಗಸ್ಟ್ 12ರಂದು ‘ಆದಾಯ ತೆರಿಗೆ ಕಾಯ್ದೆ–2025’ ಅನ್ನು ಸಂಸತ್ ಅಂಗೀಕರಿಸಿತ್ತು. ಹೊಸ ಕಾಯ್ದೆಯು ಯಾವುದೇ ಹೊಸ ತೆರಿಗೆಯನ್ನು ವಿಧಿ ಸುತ್ತಿಲ್ಲ, ಬದಲಾಗಿ ತೆರಿಗೆ ಕಾಯ್ದೆಯನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ವಿವರಿಸಲಾಗಿದೆ.
ನೇರ ಸಂಗ್ರಹದ ಗುರಿ ತಲುಪುವ ವಿಶ್ವಾಸ
‘ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು ನೇರ ತೆರಿಗೆ ಮೂಲಕ ₹25.20 ಲಕ್ಷ ಕೋಟಿ ಸಂಗ್ರಹದ ಗುರಿ ಹೊಂದಿದೆ. ಈ ಗುರಿಯನ್ನು ತಲುಪುವ ವಿಶ್ವಾಸ ಹೊಂದಲಾಗಿದೆ’ ಎಂದು ರವಿ ಅಗರ್ವಾಲ್ ಸೋಮವಾರ ಹೇಳಿದ್ದಾರೆ.
ಮರುಪಾವತಿಗೆ ಸಂಬಂಧಿಸಿದ ಕ್ಲೇಮ್‌ಗಳಲ್ಲಿ ಕೆಲವು ಹೆಚ್ಚಿನ ಮೌಲ್ಯವನ್ನು ಹೊಂದಿವೆ. ಅಲ್ಲದೆ, ಯಾವುದಾದರೂ ವಿಷಯ ನಮೂದಿಸದಿದ್ದರೆ, ಪರಿಷ್ಕರಿಸಿದ ಮರುಪಾವತಿ (ರೀಫಂಡ್) ವಿವರ ಸಲ್ಲಿಸುವಂತೆ ತೆರಿಗೆ ಪಾವತಿದಾರರಿಗೆ ತಿಳಿಸಲಾಗಿದೆ. ಇದಕ್ಕಾಗಿ ಮರುಪಾವತಿಯಲ್ಲಿ ವಿಳಂಬ ಆಗುತ್ತಿದೆ ಎಂದು ಹೇಳಿದ್ದಾರೆ.
ಸಣ್ಣ ಮೊತ್ತ ಹೊಂದಿರುವ ಮರುಪಾವತಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಮರುಪಾವತಿಗೆ ಸಲ್ಲಿಕೆ ಆಗುತ್ತಿರುವ ಕ್ಲೇಮ್‌ಗಳಲ್ಲಿ ಹಲವು ತಪ್ಪಾದ ನಮೂದುಗಳಿವೆ ಎಂಬುದನ್ನು ಪತ್ತೆ ಹಚ್ಚಲಾಗಿದೆ ಎಂದರು.
ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಬಾಕಿ ಇರುವ ಮರುಪಾವತಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಪ್ರಸಕ್ತ ಆರ್ಥಿಕ ಏಪ್ರಿಲ್ 1ರಿಂದ ನವೆಂಬರ್ 12ರ ವರೆಗೆ ₹12.92 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹವಾಗಿದೆ. ಇದು ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 6.99ರಷ್ಟು ಹೆಚ್ಚಳ. ಮರುಪಾವತಿ ಹಂಚಿಕೆಯಲ್ಲಿ ಶೇ 18ರಷ್ಟು ಇಳಿಕೆ ಆಗಿದ್ದು, ₹2.42 ಲಕ್ಷ ಕೋಟಿ ಆಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.