ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಆದಾಯ ತೆರಿಗೆ ಲೆಕ್ಕಪರಿಶೋಧನಾ ವರದಿ ಸಲ್ಲಿಸಲು ಸೆ. 30 ಕೊನೆಯದಿನವಾಗಿತ್ತು. ಆದರೆ ಈ ಗಡುವನ್ನು ಅ. 31ರವರೆಗೆ ವಿಸ್ತರಿಸಲಾಗಿದೆ.
ಆಡಿಟ್ ವರದಿಗಳನ್ನು ಸಕಾಲಕ್ಕೆ ಸಲ್ಲಿಸಲು ಸಾಧ್ಯವಾಗದ ಕಾರಣ, ತೆರಿಗೆದಾರರು ಸಮಸ್ಯೆ ಎದುರಿಸುತ್ತಿರುವುದನ್ನು ಚಾರ್ಟರ್ಡ್ ಅಕೌಂಟೆಂಟ್ ಒಕ್ಕೂಟವನ್ನೂ ಒಳಗೊಂಡು ವೃತ್ತಿಪರ ಸಂಘಗಳು ಬೇಡಿಕೆ ಇಟ್ಟಿದ್ದವು. ಇದನ್ನು ಪುರಸ್ಕರಿಸಿದ ಆದಾಯ ತೆರಿಗೆ ಇಲಾಖೆ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಹೀಗಾಗಿ ಪರಿಷ್ಕೃತ ದಿನಾಂಕ ಜಾರಿಗೆ ಬಂದಿದ್ದು, ಆ ಕುರಿತು ಒಂದಷ್ಟು ಮಾಹಿತಿ.
ವ್ಯವಹಾರ ಅಥವಾ ವೃತ್ತಿಪರ ಹಣಕಾಸು ದಾಖಲೆಗಳ ಪರಿಶೀಲನೆಯಾದ ತೆರಿಗೆ ಲೆಕ್ಕಪರಿಶೋಧನೆಯು ಆದಾಯ ತೆರಿಗೆ ಕಾಯ್ದೆಯ ಮೂಲಕ ದಾಖಲೆಯಾಗುತ್ತದೆ. ಇದು ಆದಾಯ, ವೆಚ್ಚಗಳು ಮತ್ತು ಕಡತಗಳನ್ನು ನಿಖರವಾಗಿ ವರದಿ ಮಾಡಲಾಗಿದೆಯೇ ಎಂಬುದನ್ನು ಹಾಗೂ ಅವುಗಳಿಗೆ ಸರಿಯಾದ ತೆರಿಗೆ ವಿಧಿಸಲಾಗಿದೆಯೇ ಎಂಬುದನ್ನು ಖಾತ್ರಿಪಡಿಸುತ್ತದೆ. ಲೆಕ್ಕಪರಿಶೋಧನೆಯು ಆದಾಯ ತೆರಿಗೆ ಅನುಸರಣೆ ಮತ್ತು ಕೆಲ ನಿರ್ದಿಷ್ಟ ತೆರಿಗೆದಾರರಿಗೆ ಅವರ ಆದಾಯ ಅಥವಾ ವಹಿವಾಟಿನ ಆಧಾರದ ಮೇಲೆ ಕಡ್ಡಾಯವಾಗಿದೆ.
ಯಾವುದೇ ಒಂದು ಆರ್ಥಿಕ ವರ್ಷದಲ್ಲಿ ತೆರಿಗೆದಾರನ ವ್ಯಾಪಾರ ವಹಿವಾಟು ಅಥವಾ ಒಟ್ಟು ಸ್ವೀಕರಿಸಿದ ಮೊತ್ತವು ₹1 ಕೋಟಿ ಮೀರಿದರೆ ಅಥವಾ ಶೇ 5ಕ್ಕಿಂತ ಕಡಿಮೆ ನಗದು ವಹಿವಾಟಿನ ಮೊತ್ತ ₹10 ಕೋಟಿ ಮೀರಿದರೆ ಲೆಕ್ಕಪರಿಶೋಧನೆಗೆ ಒಳಗಾಗಬೇಕಾಗುತ್ತದೆ. ವೃತ್ತಿಪರರು ಒಟ್ಟು ಸ್ವೀಕಾರ ಮೊತ್ತವು ₹50 ಲಕ್ಷ ಮೀರಿದರೆ ಅವರ ಖಾತೆಗಳೂ ಲೆಕ್ಕಪರಿಶೋಧನೆಗೆ ಒಳಪಡಬೇಕು. ಹೆಚ್ಚುವರಿಯಾಗಿ, ತೆರಿಗೆದಾರರು ಇತರ ನಿರ್ದಿಷ್ಟ ಷರತ್ತುಗಳ ಅಡಿಯಲ್ಲಿ ಆಡಿಟ್ ನಡೆಸಬೇಕಾಗುತ್ತದೆ.
ಆದಾಯ ತೆರಿಗೆ ಲೆಕ್ಕಪರಿಶೋಧನೆಗೆ ಚಾರ್ಟರ್ಡ್ ಅಕೌಂಟೆಂಟ್ ಲೆಕ್ಕಪರಿಶೋಧನೆ ನಡೆಸಬೇಕಾದ್ದು ಅಗತ್ಯ. ಇದಕ್ಕಾಗಿ ನಗದು ಪುಸ್ತಕ, ಲೆಕ್ಕ ಪುಸ್ತಕ, ಬ್ಯಾಂಕ್ ವರದಿ, ಷೇರುಪೇಟೆ ವರದಿ ಮತ್ತು ಖರೀದಿ ಅಥವಾ ಮಾರಾಟದ ಇನ್‌ವಾಯ್ಸ್ ಇರಬೇಕು. ಈ ದಾಖಲೆಗಳು ಆಯಾ ಆರ್ಥಿಕ ವರ್ಷದ ಕೊನೆಯ ದಿನದವರೆಗೂ ಇರಬೇಕು.
ಆದಾಯ ತೆರಿಗೆ ಇಲಾಖೆಯು ಸೆ. 25ರಂದು ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ‘2024–25ಕ್ಕಾಗಿ (ಮೌಲ್ಯಮಾಪನ ವರ್ಷ 2025–26) ವಿವಿದ ಆಡಿಟ್ ವರದಿಗಳನ್ನು ಸಲ್ಲಿಸಲು ನಿಗದಿತ ದಿನಾಂಕ 2025ರ ಸೆ. 30ರಿಂದ ಅ. 31ರವರೆಗೆ ವಿಸ್ತರಿಸಲು ಕೇಂದ್ರ ನೇರ ತೆರಿಗೆ ಮಂಡಳಿ (CBDT) ಕಾಯ್ದೆಯ ಸೆಕ್ಷನ್ 139ರ ಉಪವಿಭಾಗ (1) ರ ವಿವರಣೆ 2ರ ಷರತ್ತು (ಎ) ಇದರಲ್ಲಿ ಉಲ್ಲೇಖಿಸಿದಂತೆ ನಿರ್ಧರಿಸಲಾಗಿದೆ’ ಎಂದಿದೆ.
ಸೆಕ್ಷನ್ 44ಎಬಿ ಹೇಳಿದಂತೆ ತೆರಿಗೆ ಲೆಕ್ಕಪರಿಶೋಧನಾ ವರದಿಯನ್ನು ಸಲ್ಲಿಸುವುದು ಕಡ್ಡಾಯ. ತಪ್ಪಿದಲ್ಲಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 271ಬಿ ಅಡಿಯಲ್ಲಿ ದಂಡ ವಿಧಿಸಲಾಗುತ್ತದೆ. ಈ ದಂಡವು ಒಟ್ಟು ಮಾರಾಟದ ಶೇ 0.5ರಷ್ಟು ಇರಲಿದೆ. ಅದನ್ನು ₹1.5 ಲಕ್ಷಕ್ಕೆ ಮಿತಿಗೊಳಿಸಲಾಗಿದೆ. ಒಂದೊಮ್ಮೆ ಸಮರ್ಪಕ ಕಾರಣ ನೀಡಿದಲ್ಲಿ ಯಾವುದೇ ದಂಡ ವಿಧಿಸದಿರಲೂ ಅವಕಾಶವಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಹೇಳಿದೆ ಎಂದು ವರದಿಯಾಗಿದೆ.
ಆದಾಯ ತೆರಿಗೆ ಇಲಾಖೆಯ ಅಧಿಕೃತ ಅಂತರ್ಜಾಲ ತಾಣದಿಂದ ಹೆಚ್ಚಿನ ಮಾಹಿತಿ ಪಡೆಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.