ನವದೆಹಲಿ: 2025-26ರ ಮೌಲ್ಯಮಾಪನ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ದಿನಾಂಕವನ್ನು ಆದಾಯ ತೆರಿಗೆ ಇಲಾಖೆ ಜುಲೈ 31ರಿಂದ ಸೆಪ್ಟೆಂಬರ್ 15ಕ್ಕೆ ವಿಸ್ತರಿಸಿದೆ.
ತಮ್ಮ ಖಾತೆಗಳನ್ನು ಲೆಕ್ಕಪರಿಶೋಧನೆ ಮಾಡಿಸಿಕೊಳ್ಳುವ ಅಗತ್ಯವಿಲ್ಲದ ವ್ಯಕ್ತಿಗಳು ಮತ್ತು ಸಂಸ್ಥೆಗಳು ಜುಲೈ 31ರೊಳಗೆ ಆದಾಯ ತೆರಿಗೆ ರಿಟರ್ನ್ಸ್(ಐಟಿಆರ್) ಸಲ್ಲಿಸಬೇಕಾಗಿತ್ತು.
ಅಧಿಸೂಚಿತ ಐಟಿಆರ್‌ಗಳಲ್ಲಿ ಪರಿಚಯಿಸಲಾದ ವ್ಯಾಪಕ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಐಟಿಆರ್ ವ್ಯವಸ್ಥೆಯ ಸಿದ್ಧತೆ ಮತ್ತು ಬಿಡುಗಡೆಗೆ ಅಗತ್ಯವಿರುವ ಸಮಯವನ್ನು ಪರಿಗಣಿಸಿ, 2025-26ನೇ ಸಾಲಿನ ರಿಟರ್ನ್ಸ್ ಸಲ್ಲಿಸುವ ಅಂತಿಮ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಹೇಳಿಕೆಯಲ್ಲಿ ತಿಳಿಸಿದೆ.
ತೆರಿಗೆದಾರರಿಗೆ ಸುಗಮ ಮತ್ತು ಅನುಕೂಲಕರ ಫೈಲಿಂಗ್ ವ್ಯವಸ್ಥೆ ಮಾಡಿಕೊಡಲು, ಜುಲೈ 31ರಂದು ಮೂಲತಃ ನಿಗದಿಯಾಗಿದ್ದ ಐಟಿಆರ್ ಸಲ್ಲಿಸುವ ಅಂತಿಮ ದಿನಾಂಕವನ್ನು ಸೆಪ್ಟೆಂಬರ್ 15ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ.
ಈ ಬಾರಿ ತೆರಿಗೆ ಹೊಂದಾಣಿಕೆಯ ಹಲವು ನಿಯಮಗಳನ್ನು ಸರಳೀಕರಿಸಲಾಗಿದೆ. ಪಾರದರ್ಶಕತೆಗೆ ಒತ್ತು ನೀಡಲಾಗಿದೆ. ತೆರಿಗೆದಾರರಿಗೆ ನಿಖರ ಮಾಹಿತಿ ಲಭ್ಯವಾಗುವಂತೆ ಕ್ರಮವಹಿಸುವುದು ಸೇರಿ ಹಲವು ರಚನಾತ್ಮಕ ಬದಲಾವಣೆ ಮಾಡಲಾಗಿದೆ. ಈ ಬದಲಾವಣೆಗಳಿಗೆ ಪೂರಕವಾಗಿ ತೆರಿಗೆ ವ್ಯವಸ್ಥೆಯ ಅಭಿವೃದ್ಧಿಗೆ ಸಮಯಾವಕಾಶ ಬೇಕಿದೆ. ಹಾಗಾಗಿ, ಅವಧಿ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.
ಮೇ 31ರೊಳಗೆ ಸಲ್ಲಿಸಬೇಕಾದ ಟಿಡಿಎಸ್ ಹೇಳಿಕೆಗಳು ತೆರಿಗೆದಾರರಿಗೆ ಜೂನ್‌ನಿಂದ ಲಭಿಸುತ್ತವೆ. ಹಾಗಾಗಿ, ಸಮಾಯಾವಕಾಶ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.
ಸಾಮಾನ್ಯವಾಗಿ ಆರ್ಥಿಕ ವರ್ಷ ಮುಕ್ತಾಯವಾಗುವುದಕ್ಕೂ ಮೊದಲು ಐಟಿಆರ್ ಅರ್ಜಿ ನಮೂನೆಗಳ ಬಗ್ಗೆ ಅಧಿಸೂಚನೆ ಪ್ರಕಟಿಸಲಾಗುತ್ತದೆ. ಜನವರಿ/ ಫೆಬ್ರುವರಿಯಲ್ಲಿ ಅಧಿಸೂಚನೆ ಹೊರಡಿಸಲಾಗುತ್ತದೆ. ಈ ಬಾರಿ ಅಧಿಸೂಚನೆ ಹೊರಡಿಸುವುದರಲ್ಲಿ ವಿಳಂಬವಾಗಿದೆ. ಕಂದಾಯ ಇಲಾಖೆಯು ಫೆಬ್ರುವರಿಯಲ್ಲಿ ಸಂಸತ್‌ನಲ್ಲಿ ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿತ್ತು. ಇದರ ಸಿದ್ಧತೆಯಲ್ಲಿ ತೊಡಗಿಸಿದ್ದರಿಂದ ವಿಳಂಬವಾಗಿದೆ.
2025–26ನೇ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದ ಐಟಿಆರ್–1 (ಸಹಜ್) ಮತ್ತು ಐಟಿಆರ್–4 (ಸುಗಮ್) ಅರ್ಜಿ ನಮೂನೆಗಳನ್ನು ಏಪ್ರಿಲ್ 29ರಂದು ಪ್ರಕಟಿಸಲಾಗಿದೆ. ವಾರ್ಷಿಕ ₹50 ಲಕ್ಷದವರೆಗೆ ಒಟ್ಟು ಆದಾಯ ಹೊಂದಿದ ತೆರಿಗೆದಾರರು ಅವಿಭಕ್ತ ಕುಟುಂಬಗಳು ಮತ್ತು ಸಂಸ್ಥೆಗಳು ಈ ನಮೂನೆಗಳ ಅಡಿ ರಿಟರ್ನ್ಸ್ ಸಲ್ಲಿಸಬೇಕಿದೆ. ಷೇರು ಮಾರಾಟ ಮಾಡಿದ ಬಳಿಕ ಬರುವ ಲಾಭಕ್ಕೆ ವಿಧಿಸುವ ದೀರ್ಘಾವಧಿ ಬಂಡವಾಳ ವೃದ್ಧಿ ತೆರಿಗೆಯನ್ನು (ಎಲ್‌ಟಿಸಿಜಿ) ₹1.25 ಲಕ್ಷದವರೆಗೂ ಹೆಚ್ಚಿಸಲಾಗಿದೆ. ಸಂಸ್ಥೆಗಳಿಗೆ ಈ ತೆರಿಗೆಗೆ ಸಂಬಂಧಿಸಿದ ರಿಟರ್ನ್ಸ್ ಸಲ್ಲಿಸಲು ಈ ಮೊದಲು ಐಟಿಆರ್–2 ಅನ್ನು ನಿಗದಿಪಡಿಸಲಾಗಿತ್ತು. ಈಗ ಐಟಿಆರ್ 1 ಮತ್ತು ಐಟಿಆರ್ 4ರಲ್ಲಿಯೇ ಎಲ್‌ಟಿಸಿಜಿಯನ್ನು ನಮೂದಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಸರ್ಕಾರವು 80ಸಿ 80ಜಿಜಿ ಹಾಗೂ ಇತರೆ ಸೆಕ್ಷನ್‌ನಡಿ ತೆರಿಗೆ ವಿನಾಯಿತಿ ಪಡೆಯುವುದಕ್ಕೆ ಸಂಬಂಧಿಸಿದಂತೆ ಆಯ್ದ ನಮೂನೆಗಳನ್ನು ನಿಗದಿಪಡಿಸಿದೆ. ಹಾಗಾಗಿ ತೆರಿಗೆ ವಿನಾಯಿತಿಯ ಲಾಭ ಪಡೆಯುವ ತೆರಿಗೆದಾರರು ಸೆಕ್ಷನ್‌ವಾರು ವಿವರ ನಮೂದಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.